ಮಾಸ್ಕೋ:
ಭಾರತದ ಚಂದ್ರಯಾನ 3ಗೆ ಪ್ರತಿಯಾಗಿ ರಷ್ಯಾ ಕೈಗೊಂಡಿದ್ದ ಚಂದ್ರಯಾನವು (Russia Moon Mission) ಕೊನೆಯ ಕ್ಷಣದಲ್ಲಿ ವಿಫಲವಾಗಿದೆ. ರಷ್ಯಾದ ಲೂನಾ 25 ಲೂನಾರ್ ಮಿಷನ್‌ನ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವಲ್ಲಿ ವಿಫಲವಾಗಿದ್ದು, ಸಾಫ್ಟ್ ಆಗಿ ಲ್ಯಾಂಡ್ ಆಗದೆ ಹಿನ್ನಡೆ ಅನುಭವಿಸಿದೆ. ಈ ಕುರಿತು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೊಸ್ (Roscosmos) ಸ್ಪಷ್ಟಪಡಿಸಿದೆ.
“ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಆಗಿ ಲ್ಯಾಂಡ್ ಆಗುವಲ್ಲಿ ಲೂನಾ 25 ವಿಫಲವಾಗಿದೆ. ಕೊನೆಯ ಕ್ಷಣದಲ್ಲಿ ನೌಕೆಯು ಸಾಫ್ಟ್ ಲ್ಯಾಂಡ್ ಆಗದೆ, ಚಂದ್ರನ ಅಂಗಳದಲ್ಲಿ ಅಪ್ಪಳಿಸಿದೆ. ನೌಕೆಯು ಕ್ರ್ಯಾಶ್ ಆಗುವ ಮೂಲಕ ಚಂದ್ರಯಾನ ಹಿನ್ನಡೆ ಅನುಭವಿಸಿದೆ” ಎಂದು ರೋಸ್ಕೊಸ್ಮೊಸ್ ಮಾಹಿತಿ ನೀಡಿದೆ. ಇದರೊಂದಿಗೆ 47 ವರ್ಷಗಳ ಮೂಲಕ ಚಂದ್ರಯಾನ ಕೈಗೊಂಡ ರಷ್ಯಾಗೆ ಹಿನ್ನಡೆಯಾದಂತಾಗಿದೆ.
ಭಾರತದ ನೌಕೆ ಇಳಿದರೆ ಇತಿಹಾಸ ಸೃಷ್ಟಿ
ಭಾರತವು ಜುಲೈ 14ರಂದೇ ಚಂದ್ರಯಾನ ಕೈಗೊಂಡಿದ್ದು, ಭಾರತದ ವಿಕ್ರಮ್ ಲ್ಯಾಂಡರ್ ದಕ್ಷಿಣ ಧ್ರುವದಲ್ಲಿ ಯಾವುದೇ ಅಡಚಣೆ ಇಲ್ಲದೆ (Soft Landing) ಇಳಿದರೆ ಇಸ್ರೋ ಇತಿಹಾಸ ಬರೆಯಲಿದೆ. ಆಗಸ್ಟ್ 11ರಂದು ರಷ್ಯಾದ ಲೂನಾ 25 ಚಂದ್ರನತ್ತ ಪಯಣ ಆರಂಭಿಸಿತ್ತು. ಲೂನಾ 25 ಆಗಸ್ಟ್ 21ರಂದೇ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಲಿದೆ ಎಂದು ಹೇಳಲಾಗಿತ್ತು. ಇದು ಭಾರತವು ಮೊದಲು ದಕ್ಷಿಣ ಧ್ರುವದಲ್ಲಿ ಚಂದ್ರಯಾನ ಕೈಗೊಳ್ಳಬೇಕು ಎಂಬ ಕನಸಿಗೆ ಆತಂಕ ಎದುರಾಗಿತ್ತು. ಆದರೀಗ ರಷ್ಯಾದ ನೌಕೆಯು ಕ್ರ್ಯಾಶ್ ಆದ ಕಾರಣ, ಭಾರತದ ಚಂದ್ರಯಾನ ಯಶಸ್ವಿಯಾದರೆ, ಇಂತಹ ಸಾಧನೆ ಮಾಡಿದ ಜಗತ್ತಿನ ಮೊದಲ ದೇಶ ಎಂಬ ಹೆಗ್ಗಳಿಕೆ ಭಾರತದ್ದಾಗಲಿದೆ.
ಭಾರತದ ವಿಕ್ರಮ್ ಲ್ಯಾಂಡರ್‌ನ ವೇಗ ಇಳಿಸುವಿಕೆ ಪ್ರಕ್ರಿಯೆಯು ಭಾನುವಾರ ಬೆಳಗ್ಗೆ ಪೂರ್ಣಗೊಂಡಿದೆ. ಮೊದಲು ಆಗಸ್ಟ್ 18ರಂದು ಡಿಬೂಸ್ಟಿಂಗ್ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಈಗ ಎರಡನೇ ಬಾರಿಯೂ ಯಶಸ್ವಿಯಾಗಿ ವೇಗ ತಗ್ಗಿಸುವಿಕೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಇನ್ನೇನಿದ್ದರೂ ಇಸ್ರೋ ವಿಜ್ಞಾನಿಗಳಿಗೆ ಆಗಸ್ಟ್ 23ರಂದು ಸಾಫ್ಟ್ ಲ್ಯಾಂಡಿಂಗ್ ಮಾಡುವುದಷ್ಟೇ ಬಾಕಿ ಉಳಿದಿದೆ. ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾದರೆ ಭಾರತ ಇತಿಹಾಸ ಸೃಷ್ಟಿಸಲಿದೆ. ಹಾಗಾಗಿ, ಎಲ್ಲರ ಗಮನ ಈಗ ಆಗಸ್ಟ್ 23ರತ್ತ ಇದೆ.