ಬೆಂಗಳೂರು:
ಸರ್ಕಾರಿ ಕೆಲಸ (Government Jobs) ಎನ್ನುವುದು ಹೆಚ್ಚಿನ ಯುವ ಜನರ ಕನಸು. ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂದೇ ವರ್ಷಗಟ್ಟಲೆ ತಯಾರಿ ನಡೆಸುವವರೂ ಇದ್ದಾರೆ. ಅಂಥವರಲ್ಲಿ ನೀವೂ ಒಬ್ಬರಾಗಿರಬಹುದು. ಆ ರೀತಿಯ ಕನಸೇನಾದರೂ ನಿಮ್ಮಲ್ಲಿದ್ದರೆ ಇಲ್ಲಿದೆ ನೋಡಿ ಸುವರ್ಣ ಅವಕಾಶ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ನೀವೂ ನಿಮ್ಮ ಕನಸಿನ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಎಸ್‌ಎಸ್‌ಸಿ ನೇಮಕಾತಿ
ಸ್ಟಾಫ್ ಸೆಲೆಕ್ಷನ್ ಕಮಿಷನ್(ಎಸ್‌ಎಸ್‌ಸಿ) ಇತ್ತೀಚೆಗೆ ತನ್ನ ಇಲಾಖೆಯಲ್ಲಿ ನೇಮಕಾತಿಯ ಕುರಿತಾಗಿ ಪ್ರಕಟಣೆಯನ್ನು ಹೊರಡಿಸಿದೆ. ಇಲಾಖೆಯ ಗ್ರೇಡ್ ಸಿ ಮತ್ತು ಗ್ರೇಡ್ ಡಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ನೀವು ssc.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಇಲಾಖೆಯಲ್ಲಿ ಗ್ರೇಡ್ ಸಿ ಅಲ್ಲಿನ 93 ಹುದ್ದೆಗಳು ಮತ್ತು ಗ್ರೇಡ್ ಡಿ ಅಲ್ಲಿನ 1,114 ಹುದ್ದೆಗಳು ಖಾಲಿಯಿವೆ. ನೋಂದಣಿ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. ನೀವು ವೆಬ್‌ಸೈಟ್‌ನಲ್ಲಿ ಆಗಸ್ಟ್ 23ರೊಳಗಾಗಿ ಅರ್ಜಿ ಸಲ್ಲಿಕೆ ಮಾಡಬಹುದು.
ರೈಲ್ವೆ ಇಲಾಖೆ
ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯಲ್ಲೂ ಈಗ ನೇಮಕಾತಿ ನಡೆಯುತ್ತಿದೆ. ರೈಲ್ವೆ ಜೂನಿಯರ್ ಎಂಜಿನಿಯರ್, ಲೋಕೋ ಪೈಲಟ್, ಗಾರ್ಡ್, ಟ್ರೈನ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಒಟ್ಟಾರೆಯಾಗಿ 1,303 ಹುದ್ದೆಗಳಿದ್ದು, ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಅದರಲ್ಲಿ ಒಂದು ಹುದ್ದೆ ನಿಮಗೂ ಸಿಗಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು rrccr.com ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ ಸೆಪ್ಟೆಂಬರ್ 2ರ ಒಳಗಾಗಿ ಅರ್ಜಿ ಸಲ್ಲಿಸಬಹುದು. 1303 ಹುದ್ದೆಗಳ ಪೈಕಿ 732 ಸಹಾಯಕ ಲೋಕೋ ಪೈಲಟ್, 255 ಟೆಕ್ನಿಶಿಯನ್, 234 ಜೂನಿಯರ್ ಇಂಜಿನಿಯರ್ ಮತ್ತು 82 ಗಾರ್ಡ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು.
ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಎನ್‌ಸಿವಿಟಿ/ಎಸ್‌ಸಿವಿಟಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಮೆಟ್ರಿಕ್ಯುಲೇಷನ್/ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ಮಾಡಿರಬೇಕು. ಅಥವಾ ವಿವಿಧ ಇಂಜಿನಿಯರಿಂಗ್ ವಿಭಾಗದಲ್ಲಿ ಮೂರು ವರ್ಷಗಳ ಡಿಪ್ಲೊಮಾ ಮಾಡಿರಬೇಕು. ಟೆಕ್ನಿಶಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವವರು /ಎಸ್‌ಸಿವಿಟಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಮೆಟ್ರಿಕ್ಯುಲೇಷನ್/ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ಉತ್ತೀರ್ಣರಾಗಿರಬೇಕು. ಜೂನಿಯರ್ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಮೂರು ವರ್ಷದ ಡಿಪ್ಲೊಮಾ ಪದವಿ ಪಡೆದಿರಬೇಕು.
ಎಎಐ ನೇಮಕಾತಿ
ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ(ಎಎಐ) ಕೂಡ ಹಲವು ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಪ್ರಕಟಣೆ ಹೊರಡಿಸಿದೆ. ಜೂನಿಯರ್ ಅಸಿಸ್ಟೆಂಟ್, ಸೀನಿಯರ್ ಅಸಿಸ್ಟೆಂಟ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿಯಿರುವುದಾಗಿ ತಿಳಿಸಲಾಗಿದೆ. ಈ ಹುದ್ದೆಗಳಿಗೆ ಸೆಪ್ಟೆಂಬರ್ 4ರ ಒಳಗಾಗಿ www.aai.aero ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇಲಾಖೆಯಲ್ಲಿ ಒಟ್ಟಾರೆಯಾಗಿ 342 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಕೋಸ್ಟ್ ಗಾರ್ಡ್
ಭಾರತದ ಕರಾವಳಿ ರಕ್ಷಣಾ ಪಡೆಯಾದ ಇಂಡಿಯನ್ ಕೋಸ್ಟ್ ಗಾರ್ಡ್‌ನಲ್ಲೂ ನೇಮಕಾತಿ ಕುರಿತಾಗಿ ಪ್ರಕಟಣೆ ಹೊರಡಿಸಲಾಗಿದೆ. ಎಂಜಿನ್ ಡ್ರೈವರ್, ಎಂಟಿಎಸ್, ಕಾರ್ಪೆಂಟರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ನೌಕಾಪಡೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಹತೆಯ ಮಾನದಂಡಗಳನ್ನು ಪರಿಶೀಲಿಸಿಕೊಂಡು, ಅರ್ಜಿ ಸಲ್ಲಿಸಹುದಾಗಿದೆ.
ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ
ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯಲ್ಲಿ ಒಟ್ಟು 450 ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು newindia.co.in ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಆಗ್ನೇಯ ಮಧ್ಯ ರೈಲ್ವೆ: ಆ.21 ಅಂತಿಮ ದಿನ
ಆಗ್ನೇಯ ಮಧ್ಯ ರೈಲ್ವೆ ಇಲಾಖೆಯಲ್ಲಿ ರೈಲ್ವೆ ಸಹಾಯಕ, ತಂತ್ರಜ್ಞ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಇಲಾಖೆಯಲ್ಲಿ ಒಟ್ಟು 1,016 ಹುದ್ದೆಗಳಿದ್ದು, ಆಸಕ್ತರು www.apprenticeshipindia.gov.in ವೆಬ್‌ಸೈಟ್‌ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು. ಕಳೆದ ತಿಂಗಳ 18ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಗಸ್ಟ್ 21ಕ್ಕೆ ಮುಕ್ತಾಯವಾಗಲಿದೆ. ಇಲಾಖೆಯಲ್ಲಿ ಟೆಕ್ನಿಶಿಯನ್ ಮತ್ತು ತಂತ್ರಜ್ಞರಿಗೆ ನೇಮಕಾತಿ ನಡೆಯುತ್ತಿದೆ. ಅರ್ಜಿ ಸಲ್ಲಿಸುವ ಅಭರ್ಥಿಗಳು 10ನೇ ತರಗತಿ, ಐಟಿಐ, ಡಿಪ್ಲೋಮಾ ಅಥವಾ ಅದಕ್ಕೆ ಸರಿಸಮಾನವಾದ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಇಂಡಿಯನ್ ರೈಲ್ವೆ ಕನ್‌ಸ್ಟ್ರಕ್ಷನ್ ಕಂಪನಿ
ಇಂಡಿಯನ್ ರೈಲ್ವೆ ಕನ್‌ಸ್ಟ್ರಕ್ಷನ್ ಕಂಪನಿ ಲಿಮಿಟೆಡ್(IRCCL) 12 ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಆಸಕ್ತರು IRCCLನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೆಚ್ಚಿನ ವಿವರ ಪಡೆದು ಅರ್ಜಿ ಸಲ್ಲಿಸಬಹುದು. ಆಗಸ್ಟ್ 25ರಂದು ನೇರ ಸಂದರ್ಶನ ನಡೆಯಲಿದೆ.