ಬೆಂಗಳೂರು:
ಚಂದ್ರಯಾನ 3 ಯಶಸ್ಸಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಿದ್ದರು. ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಭೇಟಿಗೆ ಬಿಜೆಪಿ ನಾಯಕರಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಹೊರಗಡೆ ಸಾರ್ವಜನಿಕರಂತೆ ನಿಂತು ಮೋದಿಗೆ ಕೈಬೀಸಿದ ಫೋಟೋವೊಂದು ವೈರಲ್ ಆಗುತ್ತಿದೆ.
ಫೋಟೋದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಮುನಿರತ್ನ, ಕೆ. ಗೋಪಾಲಯ್ಯ , ಆರ್ ಅಶೋಕ್ ಕಾಣಿಸಿಕೊಂಡಿದ್ದಾರೆ. ನಾಲ್ವರು ಮುಖಂಡರು ಬ್ಯಾರಿಕೇಡ್ ಆಚೆ ನಿಂತು ಪ್ರಧಾನಿ ಮೋದಿಗೆ ಕೈ ಬೀಸಿದ್ದಾರೆ. ಅದರಲ್ಲೂ ಮುನಿರತ್ನ ಬ್ಯಾರಿಕೇಡ್ ಮೇಲೆ ಹೆಜ್ಜೆ ಇಟ್ಟು ಪ್ರಧಾನಿಗೆ ಕೈ ಬೀಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಂಚಿಕೊಂಡಿದ್ದಾರೆ.
ಪರ ವಿರೋಧ ಚರ್ಚೆ
ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇಸ್ರೋ ಭೇಟಿಯ ಹಿನ್ನೆಲೆಯಲ್ಲಿ ಪಿಎಂ ಕಚೇರಿ ಸೂಚನೆಯಂತೆ ಯಾವುದೇ ರಾಜಕೀಯ ಪ್ರತಿನಿಧಿಗಳು ಸ್ವಾಗತಕ್ಕೆ ತೆರಳಿರಲಿಲ್ಲ. ಅಷ್ಟೇ ಅಲ್ಲದೆ ಸ್ವತಃ ಬಿಜೆಪಿ ನಾಯಕರೂ ಕೂಡಾ ಅಲ್ಲಿ ಕಾಣಿಸಿಕೊಂಡಿರಲಿಲ್ಲ.
ಹೀಗಿದ್ದರೂ ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗಡೆ ಮೋದಿಗೆ ಭರ್ಜರಿ ಸ್ವಾಗತ ಕೋರಲು ಬಿಜೆಪಿ ನಾಯಕರು ಸಿದ್ಧತೆ ಮಾಡಿಕೊಂಡಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಅಲ್ಲಿ ನೆರೆದಿದ್ದರು. ಪಕ್ಷದ ಕಾರ್ಯಕರ್ತರ ಜೊತೆಯಲ್ಲೇ ಬಿಜೆಪಿ ನಾಯಕರು ನಿಂತು ಪ್ರಧಾನಿ ಮೋದಿಯನ್ನು ಸ್ವಾಗತಿಸಿದರು.
ರಾಜ್ಯದಲ್ಲಿ ಬಿಜೆಪಿಯ ಹೀನಾಯ ಪ್ರದರ್ಶನ ಹಾಗೂ ಪ್ರತಿಪಕ್ಷದ ನಾಯಕರ ಆಯ್ಕೆ ಆಗದ ಇರುವ ಹಿನ್ನೆಲೆಯಲ್ಲಿ ಮೋದಿ ಭೇಟಿಗೆ ಬಿಜೆಪಿ ನಾಯಕರಿಗೆ ಅವಕಾಶ ಸಿಗದೆ ಇರುವುದು ಮಹತ್ವ ಪಡೆದುಕೊಂಡಿದೆ.
ರಮೇಶ್ ಬಾಬು ಟೀಕೆ
ಇನ್ನು ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಅವಕಾಶ ಸಿಗದೆ ಇರುವುದು ಚರ್ಚೆಯನ್ನು ಹುಟ್ಟುಹಾಕಿಸಿದೆ. ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಟ್ವೀಟ್ ಮೂಲಕ ಟೀಕೆ ವ್ಯಕ್ತಪಡಿಸಿದ್ದಾರೆ.
ಇಂತಹ ಪರಿಸ್ಥಿತಿ ಸರ್ವಾಧಿಕಾರಿ ಆಡಳಿತದಲ್ಲಿ ಮಾತ್ರ ಕಾಣಲು ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿಯ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರು ಸ್ಥಿತಿ ನಾಯಿಪಾಡಾಗಿದೆ. ಬಿಜೆಪಿಯಲ್ಲಿ ಸ್ವಾಭಿಮಾನ, ಆತ್ಮಗೌರವ ಎಂಬುದೇ ಮಾಯವಾಗಿದೆ ಎಂದು ಅವರು ಟ್ವೀಟ್ ಮೂಲಕ ಟೀಕಿಸಿದ್ದಾರೆ. ಅಲ್ಲದೆ ಜೈ ಮೋದಿ ಎಂಬ ಒಕ್ಕಣೆಯನ್ನು ಸೇರಿಸಿದ್ದಾರೆ.