ಮುಂಬಯಿ:
ಟೀಮ್ ಇಂಡಿಯಾದ(Team India Cricket) ಪ್ರಮುಖ ವೇಗಿ ಮೊಹಮ್ಮದ್ ಶಮಿ(Mohammed Shami) ಅವರು ಕೌಟುಂಬಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. 30 ದಿನಗಳ ಒಳಗಡೆ ಶಮಿ ಜಾಮೀನು ಪಡೆಯುವಂತೆ ಕೋರ್ಟ್ ಆದೇಶಿಸಿದೆ. ಒಂದೊಮ್ಮೆ ಶಮಿ ಅವರು ಜಾಮೀನು ಪಡೆಯುವಲ್ಲಿ ವಿಫಲವಾದರೆ ಅವರ ಬಂಧನವಾಗುವ ಸಾಧ್ಯತೆ ಇದೆ. ಹೀಗಾದರೆ ಅವರು ಏಷ್ಯಾಕಪ್(asia cup 2023) ಟೂರ್ನಿನಿಂದ ಹೊರಗುಳಿಯಲಿದ್ದಾರೆ.
16 ಆಗಸ್ಟ್ 2018 ರಂದು, ಹಸಿನ್ ಜಹಾನ್(Hasin Jahan) ಮೊಹಮ್ಮದ್ ಶಮಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ಹಲ್ಲೆ, ಅತ್ಯಾಚಾರ, ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪದಡಿಯಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗನ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇದೇ ವೇಳೆ ಮಗಳ ಖರ್ಚಿಗೆ ಹಾಗೂ ತನಗೆ ಯಾವುದೇ ರೀತಿಯ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಹಸಿನ್ ಜಹಾನ್ ದೂರಿನಲ್ಲಿ ಅಪಾದಿಸಿದ್ದರು.
ಐಪಿಎಲ್ ವೇಳೆ ಪ್ರೇಮಾಂಕುರ
ಮಾಡೆಲ್ ಆಗಿರುವ ಹಸೀನ್ ಜಹಾನ್. ಕೆಕೆಆರ್ ತಂಡದಲ್ಲಿ ಚಿಯರ್ ಲೀಡರ್ ಆಗಿ ಕೆಲಸ ಮಾಡುದ್ದರು. 2011ರಲ್ಲಿ ಶಮಿ ಮತ್ತು ಹಸೀನ್ ಭೇಟಿಯಾಗಿದ್ದರು. ಈ ಭೇಟಿ ಸ್ನೇಹಕ್ಕೆ ತಿರುಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಅಲ್ಲದೆ, 2014ರಲ್ಲಿ ಮದುವೆಯಾಗಿದ್ದರು. ಈ ಜೋಡಿಗೆ ಒಬ್ಬಳು ಹೆಣ್ಣು ಮಗಳು ಕೂಡ ಇದ್ದಾಳೆ. ಸದ್ಯ ಪ್ರತ್ಯೇಕವಾಗಿ ವಾಸಿಸುತ್ತಿರುವ ಈ ಜೋಡಿ ಕೋರ್ಟ್‌ನಲ್ಲಿ ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದಾರೆ.
ಜೀವನಾಂಶ ನೀಡುತ್ತಿರುವ ಶಮಿ
2018 ರಲ್ಲಿ ಹಸಿನ್ ಜಹಾನ್ ಅವರು ಮಾಸಿಕ 10 ಲಕ್ಷ ರೂ ಜೀವನಾಂಶವನ್ನು ಕೋರಿ ಶಮ್ಮಿ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದರು. ವೈಯಕ್ತಿಕ ವೆಚ್ಚಕ್ಕಾಗಿ 7 ಲಕ್ಷ ರೂ., ತಮ್ಮ ಮಗಳ ನಿರ್ವಹಣೆಗಾಗಿ 3 ಲಕ್ಷ ರೂ. ಕೇಳಿದ್ದರು. ಇದರ ವಿಚಾರಣೆ ನಡೆಸಿದ ಕೋಲ್ಕೊತಾ ನ್ಯಾಯಾಲಯ ಇದೇ ವರ್ಷದ ಜನವರಿಯಲ್ಲಿ ತೀರ್ಪು ಪ್ರಕಟಿಸಿ, ಶಮಿ ಅವರು ಪತ್ಯೇಕವಾಗಿ ವಾಸಿಸುತ್ತಿರುವ ಪತ್ನಿ ಜಹಾನ್ಗೆ ತಿಂಗಳಿಗೆ 50 ಸಾವಿರ ರೂ. ನೀಡುವಂತೆ ಸೂಚಿಸಿತ್ತು. ಕೋರ್ಟ್ ಸೂಚನೆಯಂತೆ ಶಮಿ ಅವರು ಈ ಮೊತ್ತವನ್ನು ನೀಡಿತ್ತಲೇ ಬರುತ್ತಿದ್ದಾರೆ.
ಶಮಿ ಬಂಧನಕ್ಕೆ ಸುಪ್ರೀಂ ಮೊರೆ
ಶಮಿ ಬಂಧನಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಜಹಾನ್(mohammed shami wife) ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಹಸೀನ್ ಜಹಾನ್ ಸಲ್ಲಿಸಿದ ಮನವಿಯನ್ನು ಆಲಿಸಿತು. ಸಿಜೆಐ ಡಿ.ವೈ.ಚಂದ್ರಚೂಡ್ ಅವರು ಸೆಷನ್ಸ್ ನ್ಯಾಯಾಲಯಕ್ಕೆ ಪ್ರಕರಣವನ್ನು ಮರುಪರಿಶೀಲಿಸುವಂತೆ ಮತ್ತು ಒಂದು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಆದೇಶಿಸಿದ್ದರು. ಒಂದು ತಿಂಗಳಲ್ಲಿ ಪ್ರಕರಣವನ್ನು ಮುಗಿಸಲು ಸಾಧ್ಯವಾಗದಿದ್ದರೆ, ನ್ಯಾಯಾಧೀಶರು ತಡೆಯಾಜ್ಞೆ ಆದೇಶವನ್ನು ಮಾರ್ಪಡಿಸಲು ಆದೇಶವನ್ನು ಹೊರಡಿಸಬಹುದು ಎಂದು ಸಿಜೆಐ ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದ್ದರು. ಇದೀಗ ಕೋರ್ಟ್ 30 ದಿನಗಳ ಒಳಗೆ ಜಾಮೀನು ಪಡೆಯುವಂತೆ ಸೂಚಿಸಿದೆ. ಶಮಿ ಅವರು ಜಾಮೀನು ಪಡೆಯದೇ ಇದ್ದರೆ ಏಷ್ಯಾಕಪ್ ಸೇರಿ ವಿಶ್ವಕಪ್ನಲ್ಲಿಯೂ ಅವರಿಗೆ ಹಿನ್ನಡೆಯಾಗಲಿದೆ.