ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 13 ಸಾವಿರ ಚಾಲಕ, ಚಾಲಕ ಕಮ್ ನಿರ್ವಾಹಕರ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು, ಆರ್ಥಿಕ ಇಲಾಖೆಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಈ ಮೂಲಕ ಅಧಿಸೂಚನೆ ಹೊರಡಿಸಲು ಇನ್ನೊಂದೆ ಹಂತ ಬಾಕಿ ಇರುವುದು ಎಂಬ ಮಾಹಿತಿಯನ್ನು ಸಚಿವರು ರವಾನಿಸಿದ್ದಾರೆ.
‘ಈ ಹಿಂದೆ 2016 ರಲ್ಲಿ ನಾನು ಸಾರಿಗೆ ಸಚಿವನಾಗಿದ್ದಾಗ ಚಾಲಕ / ನಿರ್ವಾಹಕರನ್ನು ನೇಮಕಾತಿ ಮಾಡಲಾಗಿತ್ತು. ಆದರೆ ನಂತರದ 7 ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಯೆ ಈ ಸಂಸ್ಥೆಯಲ್ಲಿ ನಡೆದಿಲ್ಲ. ಹೀಗಾಗಿ ಹೊಸ ನೇಮಕಾತಿ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಅಲ್ಲದೆ 5000 ಹೊಸ ಬಸ್ಸುಗಳ ಖರೀದಿಗೆ ಮುಖ್ಯ ಮಂತ್ರಿಗಳು 500 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದಾರೆ’ ಎಂದು ಸಚಿವರು ತಿಳಿಸಿದ್ದಾರೆ.
16 ಸಾವಿರ ಉದ್ಯೋಗಿಗಳು ನಿವೃತ್ತಿ
ವಯೋನಿವೃತ್ತಿ ಹಾಗೂ ಇತರೆ ಕಾರಣಗಳಿಂದ 16,000 ಕ್ಕೂ ಹೆಚ್ಚು ಉದ್ಯೋಗಿಗಳು ಸಾರಿಗೆ ಇಲಾಖೆ ಉದ್ಯೋಗದಿಂದ ನಿವೃತ್ತಿಗೊಂಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಆದಾಗಿನಿಂದಲೂ ಯಾವುದೇ ಹೊಸ ನೇಮಕಾತಿ ಪರ್ವ ನಡೆದಿಲ್ಲ. ಒಂದು ವೇಳೆ ಸಾರಿಗೆ ಸಚಿವರು ಆರಂಭದಿಂದಲೂ ಹೇಳುತ್ತಿರುವ ಈ 13 ಸಾವಿರ ಚಾಲಕ, ನಿರ್ವಾಹಕರ ಭರ್ತಿಗೆ ಅಧಿಸೂಚನೆ ಹೊರಡಿಸಿ, ನೇಮಕ ಪ್ರಕ್ರಿಯೆಗಳು ಯಾವುದೇ ತೊಡಕಾಗದಂತೆ ಮುಗಿದಲ್ಲಿ ನೇಮಕಾತಿ ಪರ್ವ ಹೆಸರು ಪಡೆಯಲಿದೆ. ಇಲ್ಲಿವಾದಲ್ಲಿ ಬಿಜೆಪಿ ಸರ್ಕಾರದಲ್ಲಿ ಎಷ್ಟೇ ನೇಮಕಾತಿ ಅಧಿಸೂಚನೆಗಳು, ನೇಮಕ ಪ್ರಕ್ರಿಯೆಗಳು ನಡೆದರೂ ಒಂದಿಲ್ಲೊಂದು ಕಾರಣಕ್ಕೆ ಹಲವು ಪ್ರಕರಣಗಳು ದಾಖಲಾಗಿ ಕೋರ್ಟ್‌ನಲ್ಲಿವೆ. ಉದಾಹರಣೆಗೆ 15 ಸಾವಿರ ಜಿಪಿಎಸ್‌ಟಿಆರ್ ನೇಮಕಾತಿ, 545 ಪಿಎಸ್‌ಐ ನೇಮಕಾತಿ ಪ್ರಕರಣಗಳು.
ರಾಜ್ಯ ಸರ್ಕಾರದ ಮೇಲೆ ಭರವಸೆ ಕಳೆದುಕೊಂಡ ನಿರುದ್ಯೋಗಿಗಳು
ಕಾಂಗ್ರೆಸ್ ಸರ್ಕಾರ ಹಲವು ಭಾಗ್ಯಗಳ ಬದಲು ಸರ್ಕಾರದಲ್ಲಿ ಖಾಲಿ ಇರುವ ಪ್ರತಿ ಇಲಾಖೆಯ, ಪ್ರತಿ ಸಂಸ್ಥೆಯ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿದ್ದರೆ ಸಾಕಾಗುತ್ತಿತ್ತು. ಈಗ ಈ ಭಾಗ್ಯಗಳಿಗೆ ಹಣ ಒದಗಿಸುವಲ್ಲೇ ನಿರತರಾಗಿರುವ ಸರ್ಕಾರದವರು, ನಿರುದ್ಯೋಗಿಗಳ ಕಷ್ಟ ಕೇಳುತ್ತಾರೆಯೇ ಎಂದು ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ನಡೆಸುತ್ತಿರುವವರು ತಮ್ಮ ಅಳಲನ್ನು ವಿಕ’ದೊಂದಿಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದಿಂದ ಉದ್ಯೋಗ ಭರವಸೆ ನಿರೀಕ್ಷಿಸಲು ಸಾಧ್ಯವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ರಚನೆ ಆರಂಭದಿಂದಲೂ ಸಾರಿಗೆ ಸಚಿವರು ಹೀಗೆಯೇ ಹೇಳುತ್ತಿದ್ದಾರೆ ಆದರೆ ಅದು ಯಾವಾಗ ಯಶಸ್ವಿಯಾಗಿ ಅಧಿಸೂಚನೆ ಹಂತಕ್ಕೆ ಬರುತ್ತದೋ ಗೊತ್ತಿಲ್ಲ. ಆ ಭರವಸೆಯೂ ನಮಗಿಲ್ಲ ಎಂದಿದ್ದಾರೆ ಸ್ಪರ್ಧಾತ್ರಿಗಳು.