ನವದೆಹಲಿ:
ದೇಶದ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಕ್ಷಾಬಂಧನದ ಉಡುಗೊರೆ ನೀಡಲಿದ್ದಾರೆ. ಕೇಂದ್ರ ಸರ್ಕಾರವು (Central Government) ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ (LPG Price) 200 ರೂಪಾಯಿ ಇಳಿಕೆ ಮಾಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅದರಲ್ಲೂ, ಮುಂದಿನ 24 ಗಂಟೆಯಲ್ಲಿ ಬೆಲೆ ಇಳಿಕೆ ಕುರಿತು ಕೇಂದ್ರ ಸರ್ಕಾರ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರದ (ಆಗಸ್ಟ್ 29) ಸಂಪುಟ ಸಭೆಯಲ್ಲೇ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ದೇಶಾದ್ಯಂತ ಈಗ 14 ಕೆ.ಜಿಯ ಒಂದು ಸಿಲಿಂಡರ್ ಬೆಲೆ 1,100 ರೂಪಾಯಿ ಇದೆ. ಇದು ಬಡವರು ಹಾಗೂ ಮಧ್ಯಮ ವರ್ಗದವರಿಗೆ ತುಂಬ ಹೊರೆಯಾಗಿದೆ. ಹಾಗೊಂದು ವೇಳೆ ಕೇಂದ್ರ ಸರ್ಕಾರವು 200 ರೂ. ಇಳಿಕೆ ಮಾಡಿದರೆ ಕೋಟ್ಯಂತರ ಬಡ-ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ. ಹಾಗಾಗಿ, ಎಲ್ಲರ ಗಮನವೀಗ ಕೇಂದ್ರ ಸರ್ಕಾರದ ಘೋಷಣೆಯತ್ತ ಇದೆ.
ಲೋಕಸಭೆ ಚುನಾವಣೆಗೆ ರಣತಂತ್ರ?
ಮುಂದಿನ ವರ್ಷ ನಡೆಯುವ ಲೋಕಸಭೆ ಹಾಗೂ ವರ್ಷಾಂತ್ಯದಲ್ಲಿ ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೆಲೆ ಇಳಿಕೆಯ ತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ಚುನಾವಣೆಗಳಲ್ಲಿ ಬೆಲೆಯೇರಿಕೆಯು ಪ್ರಮುಖ ವಿಷಯವಾಗಿದೆ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರು ಸಿಲಿಂಡರ್ ಬೆಲೆ ಇಳಿಕೆ ಮಾಡಿದ್ದಾರೆ. ಕಾಂಗ್ರೆಸ್ ಉಚಿತ ಕೊಡುಗೆಗಳ ಗ್ಯಾರಂಟಿಗಳನ್ನು ನೀಡುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರವು ಸಿಲಿಂಡರ್ ಬೆಲೆ ಇಳಿಕೆ ಮೂಲಕ ಜನರ ಅಸಮಾಧಾನ ತಣಿಸಲು ಯತ್ನಿಸುತ್ತಿದೆ ಎಂದು ತಿಳಿದುಬಂದಿದೆ.
ಪೆಟ್ರೋಲ್ ಬೆಲೆಯೂ ಇಳಿಕೆ?
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್‌ಪಿಜಿ ಸಿಲಿಂಡರ್ ಜತೆಗೆ ಪೆಟ್ರೋಲ್, ಡೀಸೆಲ್ ಬೆಲೆಯನ್ನೂ ಕಡಿಮೆ ಮಾಡಲಿದೆ ಎನ್ನಲಾಗುತ್ತಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ದೇಶದ ಕೋಟ್ಯಂತರ ರೈತರಿಗೆ ವಾರ್ಷಿಕವಾಗಿ ನೀಡುವ 6 ಸಾವಿರ ರೂ. ಸಹಾಯಧನದ ಮೊತ್ತವನ್ನು ಹೆಚ್ಚಿಸುವುದು ಕೂಡ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಆ ಮೂಲಕ ಮುಂದಿನ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿದುಬಂದಿದೆ.