ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಶತಾಯ ಗತಾಯ ಸೋಲಿಸಲು ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟದ ತೃತೀಯ ಸಭೆಯು (I.N.D.I.A Meeting) ಗುರುವಾರದಿಂದ (ಆಗಸ್ಟ್ 31) ಆರಂಭವಾಗಲಿದ್ದು, ಎರಡು ದಿನ ಮುಂಬೈನ ಗ್ರ್ಯಾಂಡ್ ಹಯಾತ್ (Grand Hyatt) ಹೋಟೆಲ್‌ನಲ್ಲಿ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಕೂಡ ಕೈಗೊಳ್ಳಲಾಗಿದೆ. ಇನ್ನು ಸಭೆಯ ಪ್ರಮುಖ ಅಜೆಂಡಾ ಕುರಿತು ಈಗಾಗಲೇ ಚರ್ಚೆಗಳು ಶುರುವಾಗಿವೆ.
ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ಗುರುವಾರ ಹಾಗೂ ಶುಕ್ರವಾರ ಒಕ್ಕೂಟದ ಸಭೆ ನಡೆಯಲಿದ್ದು, ಮುಂಬರುವ ಲೋಕಸಭೆ ಚುನಾವಣೆ ವೇಳೆ ಸ್ಪರ್ಧಿಸಲು ಆಯಾ 26 ಪಕ್ಷಗಳಿಗೆ ಸೀಟು ಹಂಚಿಕೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗೆಯೇ, ಇಂಡಿಯಾ ಒಕ್ಕೂಟದ ಹೊಸ ಲೋಗೊವನ್ನು ಕೂಡ ಅನಾವರಣ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿಯ ಕುರಿತು ಯಾವುದೇ ಚರ್ಚೆ ನಡೆಯುವುದಿಲ್ಲ ಎನ್ನಲಾಗಿದೆ.
ಇಂಡಿಯಾ ಸಭೆಯ ವೇಳಾಪಟ್ಟಿ
ಮಹಾ ವಿಕಾಸ್ ಅಘಾಡಿಯ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಹಾಗೂ ಎನ್‌ಸಿಪಿಯು ಸಭೆ ಆಯೋಜನೆಯ ನೇತೃತ್ವ ವಹಿಸಿಕೊಂಡಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಉದ್ಧವ್ ಠಾಕ್ರೆ, ಶರದ್ ಪವಾರ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಸೇರಿ 26 ಪಕ್ಷಗಳ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಅವರು ಮುಂಬೈಗೆ ಆಗಮಿಸಿದ್ದಾರೆ.
ಕೇಜ್ರಿವಾಲ್ ಪಿಎಂ ಅಭ್ಯರ್ಥಿ ಆಗಲಿ; ಆಪ್ ಒತ್ತಾಯ
ಇಂಡಿಯಾ ಸಭೆಗೂ ಮುನ್ನವೇ ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂಬುದಾಗಿ ಘೋಷಿಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ. “ನನ್ನನ್ನು ಕೇಳಿದರೆ ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂಬುದಾಗಿ ಘೋಷಿಸಬೇಕು. ದೆಹಲಿಯಲ್ಲಿ ಹಣದುಬ್ಬರ ಕಡಿಮೆ ಇದೆ. ಉಚಿತವಾಗಿ ಶಿಕ್ಷಣ, ವಿದ್ಯುತ್ ನೀಡುತ್ತಿದ್ದಾರೆ. ಹೆಣ್ಣುಮಕ್ಕಳು ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿದ್ದಾರೆ. ಹಾಗಾಗಿ ಅವರನ್ನೇ ಪಿಎಂ ಅಭ್ಯರ್ಥಿ ಎಂಬುದಾಗಿ ಘೋಷಿಸಬೇಕು” ಎಂದು ಆಪ್ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಕಕ್ಕರ್ ಹೇಳಿದ್ದಾರೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.
ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ಸಕಲ ಸಿದ್ಧತೆ
ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ಇಂಡಿಯಾ ಒಕ್ಕೂಟದ ನಾಯಕರು ತಂಗಲು 150 ಕೋಣೆಗಳನ್ನು ಬುಕ್ ಮಾಡಲಾಗಿದೆ. ಗುರುವಾರ ರಾತ್ರಿ ಉದ್ಧವ್ ಠಾಕ್ರೆ ಅವರು ನಾಯಕರಿಗೆ ಭೋಜನ ಕೂಟ ಆಯೋಜಿಸಿದ್ದಾರೆ. ಸೀಟು ಹಂಚಿಕೆ ಹಾಗೂ ಲೋಗೊ ಅನಾವರಣ ಜತೆಗೆ 2024ರ ಲೋಕಸಭೆ ಚುನಾವಣೆ ಹಾಗೂ ಮಧ್ಯಪ್ರದೇಶ, ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಗೆಲುವಿಗೆ ರಣತಂತ್ರವನ್ನೂ ರೂಪಿಸಲಾಗುತ್ತದೆ ಎನ್ನಲಾಗಿದೆ.