ಬಾಗಲಕೋಟೆ:
ಮಹಿಳೆಯರು ಸ್ವಾಭಿಮಾನದಿಂದ ಸ್ವಾವಲಂಭಿಯಾಗಿ ಬದುಕನ್ನು ಕಟ್ಟಿಕೊಳ್ಳಲು ಗೃಹಲಕ್ಷ್ಮಿ ಯೋಜನೆ ನೆರವಾಗಲಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನವನಗರದ ಕಲಾಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗೃಹಲಕ್ಷ್ಮಿ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು. ಗೃಹಿಣಿಯರು ಕುಟುಂಬದ ದೈನಂದಿನ ಖರ್ಚು ವೆಚ್ಚಗಳಿಗೆ ಇನ್ನು ಮುಂದೆ ಪರದಾಡಬೇಕಾಗಿಲ್ಲ. ಆರ್ಥಿಕ ಅಡಚಣೆಯನ್ನು ನಿವಾರಿಸಲು ೨ ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆ ಸ್ವಾಭಿಮಾನದ ಬದುಕಿಗೆ ನೆರವಾಗಲಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು ೩,೬೩,೪೮೨ ಕುಟುಂಬದ ಮಹಿಳಾ ಯಜಮಾನಿಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಕ್ಷಣದಿಂದ ಅವರ ಬ್ಯಾಂಕ್ ಖಾತೆಗೆ ೨ ಸಾವಿರ ರೂ, ಜಮೆ ಮಾಡಲಾಗಿದೆ. ಗೃಹಿಣಿಯರು ಕುಟುಂಬದ ನಿರ್ವಹಣೆಗೆ ಅನೇಕ ಸಲ ತೊಂದರೆ ಅನುಭವಿಸುತ್ತಿರುವುದನ್ನು ನೋಡಿದ್ದೇವೆ. ಈ ನೋವು ನಿವಾರಣೆಗಾಗಿ ನಮ್ಮ ಸರಕಾರ ಇಂತಹ ಜನಪರ ಯೋಜನೆಯನ್ನು ರೂಪಿಸಿ, ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಅನುಷ್ಠಾನಕ್ಕೆ ತರುವ ಕಾರ್ಯ ಮಾಡಲಾಗಿದೆ ಎಂದರು.
ಮಹಿಳೆ ಆರ್ಥಿಕವಾಗಿ ಸದೃಡವಾದರೆ ತನ್ನಿಂದ ತಾನೆ ಆತ್ಮವಿಶ್ವಾಸ ಹೆಚ್ಚಾಗಿ ತನಗೊದಗಿ ಬಂದ ಸಂಕಷ್ಟವನ್ನು ಎದುರಿಸಲು ಮತ್ತು ತನ್ನ ಯೋಗಕ್ಷೇಮವನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರಳಾಗದಿದ್ದರೆ ಸಬಲರಾಗಲು ಸಾಧ್ಯವಿಲ್ಲ. ತಾವು ಬಯಸಿದ ವಸ್ತುಗಳನ್ನು ಪಡೆಯಲು ತಮ್ಮ ತಂದೆ ಅಥವಾ ಗಂಡನ ಮೇಲೆ ಅವಲಂಭಿತರಾಗಿದ್ದರು. ಎರಡು ಸಾವಿರ ರೂ.ಗಳನ್ನು ನೀಡುವ ಈ ಯೋಜನೆ ನಿಜವಾಗಿಯೂ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುತ್ತದೆ ಎಂದರು.
ದುಡಿಮೆ ಇರಲಿ, ಇಲ್ಲದಿರಲಿ ಯಾರೂ ಹಸಿವಿನಿಂದ ಇರಬಾರದೆಂದು ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಮಹಿಳೆಯರು ಸ್ವಾಭಿಮಾನದಿಂದ ಓಡಾಡಲು ಶಕ್ತಿ ಯೋಜನೆ ಜಾರಿಗೊಳಿಸಿದೆ. ಪ್ರತಿ ತಿಂಗಳು ವಿದ್ಯುತ್ ಬಿಲ್ ಸಂದಾಯವಾಗದಿದ್ದರೆ ಸಂಪರ್ಕವನ್ನೇ ಕಡಿತಗೊಳಿಸಲಾಗುತ್ತಿದ್ದ ಆತಂಕವನ್ನು ಸಹ ದೂರು ಮಾಡಿದೆ. ೨೦೦ ಯುನಿಟ್ ವರೆಗೆ ವಿದ್ಯುತ್ ಕೂಡಾ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿ ಅಕ್ಕ ತಂಗಿಯಂದಿಯರಿಗೆ ರಕ್ಷಾ ಬಂಧನದ ಶುಭಾಶಯಗಳನ್ನು ಸಹ ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವಾಯ್.ಮೇಟಿ ಗೃಹಲಕ್ಷ್ಮಿ ಯೋಜನೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿ.ಪಂ ಸಿಇಓ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್, ತಹಶೀಲ್ದಾರ ಅಮರೇಶ ಪಮ್ಮಾರ, ನಗರಸಭೆ ಪೌರಾಯುಕ್ತ ರಮೇಶ ಜಾದವ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇಲಾಖೆಯ ಮಹಿಳಾ ಕಾರ್ಯಕರ್ತೆಯರು ಸಚಿವರು ಹಾಗೂ ಶಾಸಕರಿಗೆ ರಾಕಿ ಕಟ್ಟಿದರು.