ಬೆಂಗಳೂರು: ಬಿಜೆಪಿಯ ಕೆಲ ಶಾಸಕರು ಪಕ್ಷ ತೊರೆಯಲಿದ್ದಾರೆ. ఎంబ ನಡುವೆಯೇ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಕಾಂಗ್ರೆಸ್ ನವರು ಸೇರಿದಂತೆ 40- 45 ಪ್ರಮುಖರು ಸಂಪರ್ಕದಲ್ಲಿರುವುದಾಗಿ ಹೇಳಿರುವ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಲೋಕಸಭಾ ಕ್ಷೇತ್ರಗಳ ಮತದಾರ ಚೇತನ ಮಹಾ ಅಭಿಯಾನ ಸಭೆಯ ಸಮಾರೋಪ ಭಾಷಣ ಮಾಡಿದ ಬಿ.ಎಲ್, ಸಂತೋಷ್ ಅವರು ಕಾಂಗ್ರೆಸ್ ನಾಯಕರು ತಮ್ಮ ಸಂಪರ್ಕದಲ್ಲಿರುವುದಾಗಿ ಹೇಳುವ ಮೂಲಕ ಪಕ್ಷದ ಶಾಸಕರನ್ನು ಸೆಳೆಯಲು ಯತ್ನಿಸುತ್ತಿರುವ ಕಾಂಗ್ರೆಸ್‌ಗೆ ತಿರುಗೇಟು ನೀಡುವ ಸುಳಿವು ನೀಡಿದ್ದಾರೆ ಎಂದೇ ವಿಶ್ಲೇಷಲಾಗುತ್ತಿದೆ.
ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿ ಆರಂಭಿಸಿದ್ದ ಲೋಕಸಭಾ ಕ್ಷೇತ್ರಗಳ ಮತದಾರ ಚೇತನ ಮಹಾ ಅಭಿಯಾನದ ಸಮಾರೋಪ ಸಮಾರಂಭ ಗುರುವಾರ ನಡೆಯಿತು.
ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳು ಸೇರಿದಂತೆ ಆಯ್ದ ಪ್ರಮುಖರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಬಿ.ಎಲ್. ಸಂತೋಷ್ ಅವರು ಸಮಾರೋಪ ಭಾಷಣ ಮಾಡಿದ್ದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ. ಮಹೇಶ್, ”ಸಭೆಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್. ಸಂತೋಷ್ ಅವರು ರಾಜಕೀಯ ವಿರೋಧಿಗಳ ‘ಹುಲಿ ಬಂತು ಹುಲಿ’ ಎಂಬ ಭ್ರಮೆಗೆ ನಾವ್ಯಾರೂ ಬೀಳುವ ಅಗತ್ಯವಿಲ್ಲ. ಚರ್ಚೆಯಾಗುತ್ತಿರುವ ಪ್ರಮಾಣದಲ್ಲಿ ಯಾವುದೇ ಪಕ್ಷಾಂತರ ಚಟುವಟಿಕ ನಡೆಯುತ್ತಿಲ್ಲ. ಎಂದಿದ್ದಾರೆ,” ಎಂದು ತಿಳಿಸಿದರು.
”ಬಿಜೆಪಿಯನ್ನು ದುರ್ಬಲಗೊಳಿಸಬೇಕೆಂಬ ಕಾಂಗ್ರೆಸ್‌ನ ತಂತ್ರದ ಭಾಗವಾಗಿ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಯಾರೊಬ್ಬರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ, ಅಂತಹ ಯಾವ ಆತಂಕವೂ ಇಲ್ಲ ಎಂಬುದಾಗಿ ಸ್ಪಪ್ಡಸಿದ್ದಾರೆ.