ನವದೆಹಲಿ:
ಕರ್ನಾಟಕ (Karnataka State) ಮತ್ತು ತಮಿಳುನಾಡು (Tamil Nadu) ನಡಿವಿನ ಕಾವೇರಿ ನೀರು ಹಂಚಿಕೆ ಸಂಬಂಧ ಪ್ರಕರಣದ (Cauvery Water Dispute) ವಿಚಾರಣೆ ಸೆ.1, ಶುಕ್ರವಾರ ನಡೆಯುವುದೇ ಅನುಮಾನವಾಗಿತ್ತು. ಹಾಗಿದ್ದೂ, ವಿಚಾರಣೆ ನಡೆದು ತಮಿಳುನಾಡು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಪರಿಗಣಿಸಿತ್ತಲ್ಲದೇ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಮುಂದಕ್ಕೆ ಹಾಕಿತು. ಈ ಮಧ್ಯೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪಾಲಿಸಿರುವುದಾಗಿ ಕರ್ನಾಟಕ ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿತು.
ಪ್ರಾಧಿಕಾರದ ಆದೇಶದಂತೆ ನಿತ್ಯ 5000 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಲಾಗಿದೆ ಎಂದು ಕರ್ನಾಟಕದ ವಾದ ಮಂಡಿಸಿದ ಶ್ಯಾಮ್ ದಿವಾನ್ ಅವರು ತಿಳಿಸಿದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ ಅವರು, ಕರ್ನಾಟಕ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಬೇಕು ಎಂದು ವಾದಿಸಿದರು.
ಅಂತಿಮವಾಗಿ ಸೆಪ್ಟೆಂಬರ್ 11ರಂದು ವಿಚಾರಣೆ ನಡೆಸುವಂತೆ ಕರ್ನಾಟಕದ ವಕೀಲರು ನ್ಯಾಯಮೂರ್ತಿ ಗವಾಯಿ ಅವರಿದ್ದ ಪೀಠಕ್ಕೆ ಮನವಿ ಮಾಡಿಕೊಂಡರು. ಆದರೆ, ಸೋಮವಾರ ವಿಚಾರಣೆ ನಡೆಸಬೇಕೆಂದು ತಮಿಳುನಾಡು ಕೋರಿತು. ಅಂತಿಮವಾಗಿ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ನಿಗದಿಪಡಿಸಿತು. ಹಾಗಾಗಿ, ಮುಂದಿನ ವಿಚಾರಣೆವರೆಗೂ ಕರ್ನಾಟಕವು ಪ್ರಾಧಿಕಾರದ ಆದೇಶದಂತೆ ನೀರು ಹರಿಸುವುದು ಅನಿವಾರ್ಯವಾಗಿದೆ.
ಕಾವೇರಿ ನೀರು ಹರಿಸುವಂತೆ ಈ ಮೊದಲು ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಅಲ್ಲದೇ, ಹೆಚ್ಚುವರಿ ಅಫಿಡವಿಟ್ ಸಲ್ಲಿಸಿ ಕರ್ನಾಟಕದ ಡ್ಯಾಮ್‌ಗಳಲ್ಲಿ ನೀರು ಲಭ್ಯತೆ ಆಧರಿಸಿ ನೀರು ಹರಿಸಲಿ ಎಂದು ವಾದಿಸಿತ್ತು.
ನೀರು ನಿಲ್ಲಿಸಲಾಗುವುದಿಲ್ಲ ಎಂದ ಡಿಸಿಎಂ ಡಿ ಕೆ ಶಿವಕುಮಾರ್
ಕಾವೇರಿ ವಿಚಾರ ಸಂಬಂಧಿಸಿ CWMA ಸಭೆ ನಡೆದಾಗ 24 ಸಾವಿರ ಕ್ಯುಸೆಕ್ ಮಾಡಬೇಕು ಅಂತ ಒತ್ತಾಯ ಮಾಡಿತ್ತು. 24ಸಾವಿರ ಕ್ಯುಸೆಕ್ ನೀರು ಬಿಡಲಾಗಲ್ಲ ಅಂತ ವಾದ ಮಾಡಿದೆವು. 5 ಸಾವಿರ ಕ್ಯುಸೆಕ್ ಬಿಡಬೇಕು ಅಂಯ ಆದೇಶ ಮಾಡಿದರು. ನಾವು 3 ಸಾವಿರ ಕ್ಯುಸೆಕ್ ಬಿಡ್ತೇವೆ ಅಂತ ಹೇಳಿದೆವು ಎಂದು ರಾಜ್ಯ ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ನೀರು ಬಿಡಬೇಕಾಗಿದ್ದನ್ನು ಹಿಂದೆ ಬಿಟ್ಟಿದ್ದೇವೆ. ನಮ್ಮ ರೈತರನ್ನು ನಾವು ಕಾಪಾಡಬೇಕು. ತಮಿಳುನಾಡಿನವರು ಬೆಳೆಗಳನ್ನು ಕಂಟ್ರೋಲ್ ಮಾಡ್ತಾ ಇಲ್ಲ. 93 ಟಿಎಂಸಿ ನೀರು ಈ ಬಾರಿ ತಮಿಳುನಾಡು ಬಳಸಿಕೊಂಡಿದೆ. ಹೆಚ್ಚೆಚ್ಚು ನೀರನ್ನು ತಮಿಳುನಾಡು ಬಳಸಿಕೊಂಡಿದೆ. ಸಂಕಷ್ಟ ಸಮಯದಲ್ಲಿ ಎಷ್ಟು ಕಡಿಮೆ ಬಳಸಿಕೊಳ್ಳಬೇಕಿತ್ತೋ ಅದಕ್ಕಿಂತ ಹೆಚ್ಚು ಬಳಸಿಕೊಂಡಿದ್ದಾರೆ. ಈ ಅಂಶವನ್ನು ನಾವು ಸುಪ್ರಿಂಗೆ ಮನವರಿಕೆ ಮಾಡಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಪಕ್ಷದವರು ಹೇಳಿದ ಪ್ರಕಾರ ನೀರು ನಿಲ್ಲಿಸಲು ಆಗುವುದಿಲ್ಲ. ಕಾನೂನು ತಜ್ಞರ ಜೊತೆಗೆ ನಾನು ಮಾತನಾಡಿದ್ದೇನೆ. ಮಳೆಯೂ ಇಲ್ಲ, ಬರೀ ಬೆಂಗಳೂರಿಗೆ ಮಳೆ ಬಂದಿದೆ ಕಾವೇರಿ ಬೇಸಿನ್ ಗೆ ಮಳೆ ಬಂದಿಲ್ಲ. ಎರಡೂ ಕಮಿಟಿಗಳ ಮುಂದೆ ನಮ್ಮ ವಾದ ಮಂಡಿಸಲು ತೀರ್ಮಾನ ಮಾಡಿದ್ದೇವೆ. ಕಾವೇರಿ ವಿಚಾರದಲ್ಲಿ ಯಾಕೆ ನಾವು ರಾಜಕೀಯ ತರಬೇಕು. ಬಿಜೆಪಿ, ಜೆಡಿಎಸ್ ನವರ ರಾಜಕೀಯ ನಿಲುವಿಗೆ ನಾನ್ಯಾಕೆ ಮಧ್ಯಪ್ರವೇಶ ಮಾಡಲಿ ಎಂದು ಡಿ ಕೆ ಶಿವಕುಮಾರ್ ಅವರು ಹೇಳಿದರು.