ಬಾಗಲಕೋಟೆ
ಪ್ರತಿ ಕೆಜಿ ಒಣ ದ್ರಾಕ್ಷಿಗೆ 250 ರೂ. ಬೆಂಬಲ ಬೆಲೆ ಘೋಷಣೆಗೆ ಒತ್ತಾಯಿಸಿ ದ್ರಾಕ್ಷಿ ಬೆಳೆಗಾರರು, ರೈತಪರ ಸಂಘಟನೆಗಳು ಹಾಗೂ ನಾಡಿನ ಮಠಾಧೀಶರ ನೇತೃತ್ವದಲ್ಲಿ ಬೃಹತ್ ಸಮಾವೇಶ ಸೆ.7ರಂದು ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ಬಳಿ ಹಮ್ಮಿಕೊಳ್ಳಲಾಗಿದೆ ಎಂದು ಕರಭಂಟನಾಳ ಗುರು ಗಂಗಾಧರೇಶ್ವರ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ ಕನಿಷ್ಠ ೩೦ ಸಾವಿರ ದ್ರಾಕ್ಷಿ ಬೆಳೆಗಾರರು ಹಾಗೂ ರೈತ ಮುಖಂಡರು, ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು.
ಇಡೀ ದೇಶದಲ್ಲಿ ದ್ರಾಕ್ಷಿ ಬೆಳೆಗೆ ಮಹಾರಾಷ್ಟ್ರ ರಾಜ್ಯ ಪ್ರಥಮ ಸ್ಥಾನ. 2ನೇ ಸ್ಥಾನದಲ್ಲಿ ಕರ್ನಾಟಕ, ಅದರಲ್ಲಿ ವಿಶೇಷವಾಗಿ ವಿಜಯಪುರ ಜಿಲ್ಲೆಯಲ್ಲಿ ಶೇ.70ಕ್ಕಿಂತ ಅಧಿಕ ಬೆಳೆಗಾರರು ದ್ರಾಕ್ಷಿ ಬೆಳೆಯುತ್ತಿದ್ದಾರೆ. ಗುಣಮಟ್ಟದ ದ್ರಾಕ್ಷಿ ಬೆಳೆಯುತ್ತಿದ್ದರೂ, ಒಣ ದ್ರಾಕ್ಷಿಗೆ ಬೆಂಬಲ ಬೆಲೆಯಿಲ್ಲ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಕೆಜಿ ಒಣದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಕೇವಲ 60 ರಿಂದ 70 ರೂಪಾಯಿ ಮಾರಾಟವಾಗುತ್ತಿದೆ. ಕಳೆದ ವರ್ಷ ಅಲ್ಪಸ್ವಲ್ಪ ಒಣ ದ್ರಾಕ್ಷಿಗೆ 200ರಿಂದ 250 ರೂ. ಬೆಲೆಯಿತ್ತು. ಆದರೆ ಈ ಭಾರಿ ಸಂಪೂರ್ಣ ಬೆಲೆ ಕುಸಿತವಾಗಿದೆ. ಇದರಿಂದ ದ್ರಾಕ್ಷಿ ಬೆಳೆದ ರೈತರು ತೀವ್ರ ಕಂಗಾಲಾಗಿದ್ದಾರೆ ಎಂದು ಬೆಳೆಗಾರರ ಸಮಸ್ಯೆಯನ್ನು ಬಿಚ್ಚಿಟ್ಟರು.
ಜಿಲ್ಲೆಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿಗಳ ಬಳಿ ನಿಯೋಗದಲ್ಲಿ ತೆರಳಿ ಮನವರಿಕೆ ಮಾಡಿಕೊಡಬೇಕು. ನಂತರ ಸರಕಾರದ ನೇತೃತ್ವದಲ್ಲಿ ರಾಜ್ಯದ ಮಠಾಧೀಶರ ಹಾಗೂ ರೈತರ ನೇತೃತ್ವದಲ್ಲಿ ಪ್ರಧಾನ ಮಂತ್ರಿ ಬಳಿ ನಿಯೋಗದಲ್ಲಿ ತೆರಳಿ ಪ್ರಧಾನಿಗೆ ಮನವರಿಕೆ ಮಾಡಿಕೊಡಬೇಕೆಂದರು.
ಒಣದ್ರಾಕ್ಷಿಯಲ್ಲಿ ವಿಟಾಮಿನ್ ಬಿ, ಸಿ, ಗ್ಲೋಕೋಸ್, ಕ್ಯಾಲ್ಸಿಯಂ ಸೇರಿದಂತೆ ಸದೃಢ ಆರೋಗ್ಯಕ್ಕೆ ಪೂರಕವಾದ ಎಲ್ಲ ಗುಣಗಳು ಅದರಲ್ಲಿವೆ. ಮಕ್ಕಳು ಸೇವಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಆಸ್ಪತ್ರೆಯಲ್ಲಿ ರೋಗಿಗಳು ಕೂಡ ನೀಡಿದರೆ ಅವರ ಆರೋಗ್ಯದಲ್ಲಿ ಸುಧಾರಣೆ ಕಾಡುತ್ತದೆ. ಹಾಗಾಗಿ ಅಕ್ಷರ ದಾಸೋಹ ಯೋಜನೆಯಡಿ ಕನಿಷ್ಠ 50 ಗ್ರಾಂ ನಷ್ಟು ಒಣದ್ರಾಕ್ಷಿಯನ್ನು ವಿತರಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದರು.
ಹಿರೂರಿನ ಜಯ ಸಿದ್ದೇಶ್ವರ ಸ್ವಾಮೀಜಿ, ನರೇಗಲ್ ನ ಮಲ್ಲಿಕಾರ್ಜುನ ದೇವರು, ರೈತ ಸಂಘದ ಅರವಿಂದ ಕುಲಕರ್ಣಿ ಇದ್ದರು.