ಬಾಗಲಕೋಟೆ
ಸಂಬಂಧಿಕರಿಗೆ ಮಾತನಾಡಬೇಕು ಎಂದು ಹೇಳಿ ಮೊಬೈಲ್ ತೆಗೆದುಕೊಂಡು ಪರಾರಿಯಾಗುವ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿದೆ.
ರಬಕವಿ ಬನಹಟ್ಟಿ ತಾಲೂಕಿನಲ್ಲಿ ಇಂತಹ ಪ್ರಕರಣ ಹೆಚ್ಚುತ್ತಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಕಳೆದೊಂದು ವಾರದಿಂದ ತಾಲೂಕಿನಲ್ಲಿ ದ್ವಿಚಕ್ರ ವಾಹನ ಮೇಲೆ ಬರುವ ಖದೀಮರು ಅಂಗಡಿ ಮಾಲೀಕರ ಬಳಿ ಬಂದು ಮೊಬೈಲ್ ಎಗರಿಸುತ್ತಿದ್ದಾರೆ.
ವಸ್ತು ಖರೀದಿ ಸೋಗಿನಲ್ಲಿ ಅಂಗಡಿಗೆ ಬರುವ ಕಳ್ಳರು ಅಂಗಡಿ ಮಾಲೀಕರಿಂದ ಸ್ವಲ್ಪ ಕಾಲ್ ಮಾಡುವುದಿದೆ ಮೊಬೈಲ್ ಕೊಡಿ ಎಂದು ಕೇಳುತ್ತಾರೆ. ಮೊಬೈಲ್ ತೆಗೆದುಕೊಂಡು ಕಿವಿಗೆ ಹಚ್ಚಿ ದೂರದಲ್ಲಿರುವ ಬೈಕ್ ನತ್ತ ನಡೆಯುತ್ತ. ಪರಾರಿಯಾಗುತ್ತಿರುವ ಘಟನೆ ಜನರ ನಿದ್ದೆಗೆಡಿಸಿದೆ.
ನಗರದ ಡೆಂಷೋಡೇರಿ ರಸ್ತೆ, ಬಸ್ ನಿಲ್ದಾಣ ಹೀಗೆ ಜನನಿಬೀಡ ಪ್ರದೇಶ ಅಥವಾ ಹೊರ ವಲಯಗಳಲ್ಲಿ ಮೊಬೈಲ್ ಕಳ್ಳತನ ಮಾಡುವ ಜಾಲ ಹೆಚ್ಚಾಗಿದೆ. ಮುಗ್ಧತೆಯಿಂದ ಮೊಬೈಲ್ ಕೇಳಿ ಬೈಕ್ ಮೇಲೆ ಪರಾರಿಯಾಗುತ್ತಿದ್ದಾರೆ.
ಮಾತನಾಡುವ ನೆಪದಲ್ಲಿ ಮೊಬೈಲ್ಗಳನ್ನು ಕಳ್ಳರು ಎಗರಿಸುತ್ತಿರುವುದರಿಂದ ಜನರು ಮೊಬೈಲ್ ಕೊಡಲು ಹಿಂದೇಟು ಹಾಕುವಂತಾಗಿದೆ.
ಪೊಲೀಸ್ ಇಲಾಖೆ ಕಳ್ಳರ ಬಂಧನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.