ಬೆಂಗಳೂರು
ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪದ ಕೇಳಿ ಬಂದಿದ್ದಾಗ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಿಎಂ ನಿವಾಸಕ್ಕೆ ಮುತ್ತಿಗೆ ಸಂಬಂಧ ಆಗ ಪ್ರತಿಪಕ್ಷ ನಾಯಕರಾಗಿದ್ದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿದೆ.
ಪ್ರಕರಣ ರದ್ದು ಕೋರಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಸಂಸದರು- ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಚಾರಣೆಗೆ ನಿಗದಿತವಾಗಿರುವ ಹೈಕೋರ್ಟ್ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಧಾರವಾಡದಲ್ಲಿ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯವರೆಗೆ ಪ್ರಕರಣಕ್ಕೆ ತಡೆ ನೀಡಿತು. ಅಲ್ಲದೆ, ಸರಕಾರಿ ವಕೀಲರಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಸೆ.15ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಅಂದಿನ ಸಚಿವ ಕೆ.ಎಸ್. ಈಶ್ವರಪ್ಪ ಕಾರಣರಾಗಿದ್ದು, ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ 2022ರ ಏ.14ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅದರ ಭಾಗವಾಗಿ ಕಾಂಗ್ರೆಸ್ ಭವನದಿಂದ ಮುಖ್ಯಮಂತ್ರಿಯವರ ನಿವಾಸಕ್ಕೆ ಮುತ್ತಿಗೆ ಹಾಕಲು ಮೆರವಣಿಗೆ ನಡೆಸಲಾಗಿತ್ತು. ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಮಾಡಿದ. ಕಾನೂನು-ಸುವ್ಯವಸ್ಥೆಗೆ ಭಂಗ ತಂದ ಆರೋಪದ ಮೇರೆಗೆ ಪ್ರತಿಭಟನಾಕಾರರ ವಿರುದ್ಧ ಹೈಗ್ಲೆಂಡ್ಸ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆ ದಾಖಲಾಗಿತ್ತು.