ಬಾಗಲಕೋಟೆ:
ಈ ಭಾಗದ ಮಣ್ಣಿನ ಶಕ್ತಿ ದೊಡ್ಡದಿದ್ದು, ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದು ಪ್ರಶಸ್ತಿ ಪಡೆದುಕೊಂಡು ಹೋದಲ್ಲಿ ನಿಮ್ಮ ಉಜ್ವಲ ಭವಿಷ್ಯ ಮುಧೋಳದಿಂದಲೇ ಆರಂಭಗೊಳ್ಳಲಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಮುಧೋಳ ನಗರದ ದಾನಮ್ಮದೇವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲೂಕಾ ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಎರಡನೇ ದಿನದ ಕುಸ್ತಿ ಪಂದ್ಯಾವಳಿಯನ್ನು ಉದ್ದೇಶಿಸಿ ಮಾತನಾಡಿದ ಅವರು 22 ವರ್ಷಗಳ ಹಿಂದೆ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಮುಧೋಳದ ಗೋರ್ಪಡೆ ಎಂಬ ಕ್ರೀಡಾಪಟು ಜಯಶಾಲಿಯಾಗಿ ರಾಷ್ಟ್ರದ ಕೀರ್ತಿ ತಂದಿದ್ದಾರೆ. ಈ ನೆಲದ ಮಹತ್ವ ಅಂತಹದಿದೆ ಎಂದರು.
ರಾಜ್ಯದ 26 ಜಿಲ್ಲೆಗಳಿಂದ 1200 ಕ್ರೀಡಾಪಟುಗಳು ಪಾಲ್ಗೊಂಡಿದ್ದೀರಿ. ಇದರಲ್ಲಿ ಮುಧೋಳದವರೇ 150 ಕ್ರೀಡಾಪಟುಗಳು ಇದ್ದಾರೆ. ಈ ಭಾಗದಲ್ಲಿ ಕುಸ್ತಿ ಕಣ ಸಮರ್ಥವಾಗಿ ಬೆಳೆದಿದೆ. ಇದರಿಂದಲೇ ಈ ಭಾಗದಲ್ಲಿ ಅನೇಕ ಕುಸ್ತಿ ಪಟುಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಕೀರ್ತಿ ತಂದಿದ್ದಾರೆ. ಟರ್ಕಿ ದೇಶದಲ್ಲಿ ನಡೆದ ಅಪ್ಲೇಟಿಕ್ಸ್‍ನಲ್ಲಿ ಮುಧೋಳಿನ ಹುಡುಗ ರಾಷ್ಟ್ರದ ಧ್ವಜ ಹಿಡಿದು ನಿಲ್ಲುವ ಮೂಲ ದೇಶದ ಕೀರ್ತಿ ಹೆಚ್ಚಿದಂತಾಗುತ್ತದೆ ಎಂದರು.
ಕಳೆದ 22 ವರ್ಷಗಳಿಂದ ಗೋರ್ಪಡೆ ಕುಸ್ತಿ ಪಟುವಾಗಿದ್ದು, ಸದ್ಯ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ನೌಕರಿ ಬಿಟ್ಟು ಕುಸ್ತಿ ಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಧೋಳದಲ್ಲಿಯೇ ದೊಡ್ಡ ಸಂಸ್ಥೆಯನ್ನು ಕಟ್ಟುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅದಕ್ಕೆ ನನ್ನ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಕುಸ್ತಿ ಪಂದ್ಯಾವಳಿ ಆಯೋಜನೆಯಿಂದ ಈ ಭಾಗದ ಮಕ್ಕಳಲ್ಲಿ ಪಂದ್ಯಾವಳಿ ಮೆಲುಕು ಹಾಕುವಂತೆ ಮಾಡಿದೆ. ರಾಜ್ಯ ಮಟ್ಟದಲ್ಲಿ ಜಯಶಾಲಿಯಾಗಿ ರಾಷ್ಟ್ರ ಮತ್ತು ವಿದೇಶದಲ್ಲಿ ನಾಡಿನ ಕೀರ್ತಿ ತರುವಂತಾಗಲಿ. ಈ ಭಾಗದಲ್ಲಿ ಕುಸ್ತಿ ಹಬ್ಬ ಆಯೋಜನೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕುಸ್ತಿ ಪಟು ಕಲ್ಮೇಶ ಅನಭೋಜಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 2002ರಲ್ಲಿ ಮುಧೋಳದಲ್ಲಿ ಪ್ರಥಮ ಬಾರಿಗೆ ಕುಸ್ತಿ ಪಂದ್ಯಾವಳಿಗಳು ನಡೆದಿದ್ದು, ಅದಾದ ನಂತರ 22 ವರ್ಷಗಳ ಬಳಿಕ ಮತ್ತೆ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಅಚ್ಚುಕಟ್ಟಾಗಿ ಪಂದ್ಯಾವಳಿ ಆಯೋಜಿಸಿದ್ದು, ಈ ಭಾಗದಲ್ಲಿ ಅನೇಕ ಕುಸ್ತಿ ಪಟುಗಳು ರಾಜ್ಯಕ್ಕೆ ಹೆಸರು ತಂದಿದ್ದಾರೆ. ಕ್ರೀಡಾಪಟುಗಳಿಗೆ ಇನ್ನಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರನ್ನ ಕ್ರೀಡಾಂಗಣದಲ್ಲಿ ಗ್ಯಾಲರಿ ಹಾಗೂ ಮೂಲಭೂತ ವ್ಯವಸ್ಥೆ ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ. ತಹಶೀಲ್ದಾರ ವಿನೋಧ ಹತ್ತಳ್ಳಿ, ಮುಖಂಡರಾದ ಮಾರುತಿ, ಭೀಮನಗೌಡ ಅರಕೇರಿ, ನಿಂಗಪ್ಪ ತಿಮ್ಮನ್ನವರ, ಧರೆಪ್ಪ, ಶಿವಾನಂದ, ರಘು ಮೊಕಾಶಿ, ಗೋವಿಂದಪ್ಪ, ಸೈಯದ ಹುದಗಿ, ರಫೀಕ್ ಬೇಪಾರಿ, ನಿಂಗನಗೌಡ ಮಂಟೂರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ಎಲ್ಲರನ್ನು ಸ್ವಾಗತಿಸಿದರು.