ಬಾಗಲಜೋಟೆ
ಹುನಗುಂದ ತಾಲೂಕಿನ ಹೊನ್ನರಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಉದ್ಘಾಟನೆ ನೆರವೇರಿಸಿ ಹುನಗುಂದ ಎಸಿಡಿಪಿಒ ವೆಂಕಣ್ಣ ಗಿರಿತಿಮ್ಮಣ್ಣವರ ಮಾತನಾಡುತ್ತ, ಮನೆಮನೆಗೆ ಭೇಟಿ ನೀಡಿ ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಇಲಾಖೆ ನೀಡುವ ಪೌಷ್ಠಿಕ ಆಹಾರವನ್ನು ಮಕ್ಕಳಿಗೆ ವಿತರಿಸಿ ಅಪೌಷ್ಠಿಕತೆ ನಿವಾರಣೆ ಮಾಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ದೊಡ್ಡದಾಗಿದೆ ಎಂದರು.
ಪೌಷ್ಠಿಕ ಆಹಾರ ಪ್ರದರ್ಶನ ಉದ್ಘಾಟಿಸಿ ಇಳಕಲ್ ಎಸಿಡಿಪಿಒ ರಮೇಶ ಸೂಳಿಕೇರಿ ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ರೋಗ ಹರಡುವ ವೈರಾಣುಗಳ ಸಂಖ್ಯೆ ಉಲ್ಬಣಗೊಳ್ಳುತ್ತವೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಶೀಘ್ರವಾಗಿ ರೋಗಕ್ಕೆ ತುತ್ತಾಗುತ್ತಾರೆ. ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಆರೋಗ್ಯ ಹದಗೆಡುತ್ತದೆ. ಇದರಿಂದ ದೇಹಕ್ಕೆ ರಕ್ಷಣೆ ನೀಡಲು ಉತ್ತಮ ಪೋಷಕಾಂಶಯುಕ್ತ ಆಹಾರ ಸೇವನೆಯ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಅಧ್ಯಕ್ಷತೆವಹಿಸಿದ್ದ ರಕ್ಕಸಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೃತಿ ನೀಲಮ್ಮನವರ ಮಾತನಾಡುತ್ತ, ಸರಕಾರ ನೀಡುವ ಆಹಾರವನ್ನು ಅಂಗನವಾಡಿ ಕಾರ್ಯಕರ್ತೆಯರು ಮನೆಗೆ ನೀಡಿದರೆ ಮನೆಯ ಇತರ ಸದಸ್ಯರು ಅದನ್ನು ಬಳಸುವುದರಿಂದ ನಿಜವಾಗಿಯೂ ಅದರ ಅಗತ್ಯ ಇರುವ ಮಕ್ಕಳು, ತಾಯಂದಿರು, ಗರ್ಭಿಣಿಯರು ಪೌಷ್ಠಿಕ ಆಹಾರದ ಕೊರತೆ ಎದುರಿಸಬೇಕಾಗುತ್ತದೆ. ಆದ್ದರಿಂದ ಅಂಗನವಾಡಿಯಲ್ಲೇ ಅದನ್ನು ಬೇಯಿಸಿ ಫಲಾನುಭವಿಗಳಿಗೆ ವಿತರಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸೀಮಂತ ಕಾರ್ಯಕ್ರಮ, ತೊಟ್ಟಿಲು ಕಾರ್ಯಕ್ರಮ, ಜನ್ಮ ದಿನಾಚರಣೆ, ಅನ್ನಪ್ರಾಶನ ಕಾರ್ಯಕ್ರಮಗಳು ಜೊತೆಗೆ ಸನ್ಮಾನ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಬಿ ಎಸ್ ಜಕ್ಕಣ್ಣವರ, ಎಸ್ ಎಸ್ ಇಟಗಿ, ಬಸಮ್ಮ ಗಾಣಿಗೇರ, ಗೌರಮ್ಮ ಹಿರೇಮಠ, ಸಿಎಚ್ಓ ಜ್ಯೋತಿ ಹೊರಕೇರಿ, ಕಿರಿಯ ಆರೋಗ್ಯ ಸಹಾಯಕಿ ಭುವನೇಶ್ವರಿ, ರಾಮನಗೌಡ ಮಾಗಿ, ಶಿಕ್ಷಕರಾದ ಎಸ್ ಎಸ್ ಲಾಯದಗುಂದಿ, ಅಶೋಕ ಬಳ್ಳಾ, ಅಂಗನವಾಡಿ ಕಾರ್ಯಕರ್ತೆಯರಾದ ಗಂಗಮ್ಮ ಗುಡೂರ, ಲಕ್ಷ್ಮೀಬಾಯಿ ಅಳ್ಳೊಳ್ಳಿ, ರತ್ನಾ ಗುಡದನ್ನವರ, ಗಿರಿಜಾ ಗೌಡರ, ಗೀತಾ ಹಳ್ಳೂರ, ರೇಣುಕಾ ಹೊಸಮನಿ ಇತರರು ಇದ್ದರು.