ಬೆಂಗಳೂರು
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWRC) ಮತ್ತೆ ಹದಿನೈದು ದಿನಗಳ ಕಾಲ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿಸಲು ಆದೇಶಿಸಿರುವುದು ಘೋರ ಅನ್ಯಾಯ. ಕರ್ನಾಟಕದ ಜನತೆ ದಂಗೆ ಏಳುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.
ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ಸ್ ನೀರು ಹರಿಸಿದರೆ ಒಟ್ಟು ಏಳು ಟಿಎಂಸಿ ನೀರು ಹರಿಸಬೇಕಾಗುತ್ತದೆ. ಕಾವೇರಿ ಭಾಗದ ಜಲಾಶಯಗಳು ಬರಿದಾಗಬೇಕಾಗುತ್ತದೆ. ಇದು ಪ್ರಾಧಿಕಾರಕ್ಕೆ ತಿಳಿದಿಲ್ಲವೇ? ಇಂಥ ಅನ್ಯಾಯದ ಆದೇಶ ಹೊರಡಿಸಿರುವುದರ ಹಿಂದೆ ದೊಡ್ಡ ಸಂಚು ಇದೆ.
ಕಾವೇರಿ ಕಣಿವೆಯಲ್ಲಿ ಈಗಾಗಲೇ ಭೀಕರ ಬರದ ಸ್ಥಿತಿ ಇದೆ. ವಾಡಿಕೆಯಂತೆ ಮಳೆ ಆಗದೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗುವ ಸ್ಥಿತಿ ಇದೆ. ಕಾವೇರಿ ಕಣಿವೆಯ ರೈತರ ಹೊಲಗದ್ದೆಗಳಿಗೆ ನೀರಿಲ್ಲದಿರುವಾಗ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀರು ಹರಿಸಲು ಹೇಳುವುದು ಎಷ್ಟು ಸರಿ?
ರಾಜ್ಯ ಸರ್ಕಾರ ಈಗಾಗಲೇ ತಮಿಳುನಾಡಿಗೆ ಏಳು ಟಿಎಂಸಿ ನೀರು ಹರಿಸಿದೆ. ಈಗ ಮತ್ತೆ ಏಳು ಟಿಎಂಸಿ ನೀರು ಹರಿಸಿದರೆ ಕಾವೇರಿ ಜಲಾನಯನ ಭಾಗದ ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರ ನೀರು ಹರಿಸಬಾರದು.
ಹಿಂದೆ ಎಸ್.ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಇಂಥದ್ದೇ ಅನ್ಯಾಯದ ಆದೇಶ ಬಂದಾಗ, ಇದನ್ನು ಪಾಲಿಸಲು ಸಾಧ್ಯವಿಲ್ಲ ಎಂಬ ದಿಟ್ಟ ತೀರ್ಮಾನ ಕೈಗೊಂಡಿದ್ದರು. ಈಗ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರವೂ ಇಂಥದ್ದೇ ತೀರ್ಮಾನ ಕೈಗೊಂಡು ಪ್ರಾಧಿಕಾರದ ಆದೇಶವನ್ನು ಧಿಕ್ಕರಿಸಬೇಕು.
ರಾಜ್ಯವನ್ನು ಪ್ರತಿನಿಧಿಸುತ್ತಿರುವ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು ಏನು ಮಾಡುತ್ತಿದ್ದಾರೆ? ಕರ್ನಾಟಕಕ್ಕೆ ಇಷ್ಟು ದೊಡ್ಡ ಅನ್ಯಾಯವಾದರೂ ಯಾಕೆ ಬಾಯಿ ಬಿಡುತ್ತಿಲ್ಲ? ಕೂಡಲೇ ಎಲ್ಲ ಸಂಸತ್ ಸದಸ್ಯರು ಒಂದಾಗಿ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು.
ರಾಜ್ಯ ಸರ್ಕಾರ ಒಂದುವೇಳೆ ಮತ್ತೆ ನೀರು ಹರಿಸುವ ನಿರ್ಧಾರ ಕೈಗೊಂಡರೆ ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಬೇಕಾಗುತ್ತದೆ. ರೈತರು ದಂಗೆ ಏಳುವ ಸ್ಥಿತಿ ನಿರ್ಮಾಣವಾಗುತ್ತದೆ. ರಾಜ್ಯ ಸರ್ಕಾರ ಯಾವ ಕಾರಣಕ್ಕೂ ನೀರು ಹರಿಸಬಾರದು ಎಂದು ಆಗ್ರಹಿಸಿದ್ದಾರೆ.