ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದ ಶ್ರೀ ಮಾರುತೇಶ್ವರ, ಬಸವೇಶ್ವರ ದೇವರ ಜಾತ್ರೆಯು ಬರುವ ದಿನಾಂಕ ೧೬ ರಿಂದ ೧೮ ರವರೆಗೆ ವಿಜೃಂಭಣೆಯಿಂದ ಜರುಗುವುದು. ಭಕ್ತಾದಿಗಳು ಜಾತ್ರೆಗೆ ಆಗಮಿಸಿ ಮಾರುತೇಶ್ವರ ಹಾಗೂ ಬಸವೇಶ್ವರ ಕೃಪೆಗೆ ಪಾತ್ರರಾಗಬೇಕೆಂದು ತಿಮ್ಮಾಪೂರ ಗ್ರಾಮಸ್ಥರು ವಿನಂತಿಸಿದ್ದಾರೆ.
ದಿನಾಂಕ ೧೬-೦೯-೨೦೨೩ ಶನಿವಾರ ರಾತ್ರಿ ೮-೦೦ ಕ್ಕೆ ಶ್ರೀ ಮಾರುತೇಶ್ವರ ಪಲ್ಲಕ್ಕಿ ಹಾಗೂ ನೂರಾರು ಭಕ್ತರು ಬರಿಗಾಲಿನಿಂದ ತಿಮ್ಮಾಪೂರ ಪತ್ರಿಗಿಡದ ಬಸವೇಶ್ವರನಿಗೆ ಪೂಜೆ ಸಲ್ಲಿಸಿ, ಕಿರಸೂರ ಗ್ರಾಮಕ್ಕೆ ತೆರಳುತ್ತಾರೆ. ಕಿರಸೂರಿನ ಗ್ರಾಮಸ್ಥರು ಶ್ರೀ ಮಾರುತೇಶ್ವರ ಪಲ್ಲಕ್ಕಿ ಹಾಗೂ ಭಕ್ತರನ್ನು ಬರಮಾಡಿಕೊಳ್ಳುತ್ತಾರೆ. ಅಲ್ಲಿನ ಹನಮಂತ ದೇವರಿಗೆ ಪೂಜೆ ಸಲ್ಲಿಸುವರು. ಅಲ್ಲಿಂದ ಕಿರಸೂರು ಗ್ರಾಮಸ್ಥರು ಡೊಳ್ಳಿನ ಸಂಗಡ ೫ ಕುಂಬಳ ಎಲೆ ತೆಗೆದುಕೊಂಡು ರಾತ್ರಿ ೧೨-೦೦ ಘಂಟೆಯ ಸುಮಾರಿಗೆ ಹಡಗಲಿ ಸಮೀಪದ ಮಲಪ್ರಭಾ ನದಿಗೆ ತೆರಳುತ್ತಾರೆ.
ಮಲಪ್ರಭಾ ನದಿಯಲ್ಲಿ ಸ್ನಾನ ಮಾಡಿದ ನಂತರ ಹೊಳೆಯಲ್ಲಿ ಪೂಜೆ, ಪುನಸ್ಕಾರಗಳು ನಡೆಯುವವು. ಅಲ್ಲಿಂದ ಹೊರಟು ಹಡಗಲಿ ಗ್ರಾಮಕ್ಕೆ ತೆರಳಿ ಅಲ್ಲಿಯ ಹನಮಂತ ದೇವರಿಗೆ ಪೂಜೆ ಸಲ್ಲಿಸಿದ ನಂತರ ಅಲ್ಲಿ ಮುಂಜಾನೆ ೪-೦೦ ರ ಸುಮಾರಿಗೆ ಹನುಮಂತ ದೇವರ ಕಟ್ಟೆಯ ಮೇಲೆ ಮಾರುತೇಶ್ವರ ಪೂಜಾರಿಯು ಭವಿಷ್ಯದ ಮಳೆ, ಬೆಳೆ, ಹೇಳಿಕೆ ನಡೆಯುವದು. ನಂತರ ಪಲ್ಲಕ್ಕಿ ಹಾಗೂ ಭಕ್ತರಿಗೆ ಕುರಹಟ್ಟಿ ಸಹೋದರರು ಅಲ್ಪೋಪಹಾರದ ಸೇವೆಯನ್ನು ಸಲ್ಲಿಸುತ್ತಾರೆ. ಪ್ರಸಾದ ನಂತರ ಮರಳಿ ಪಲ್ಲಕ್ಕಿಯೊಂದಿಗೆ ಗ್ರಾಮಕ್ಕೆ ಬಂದು ತಲಪುತ್ತಾರೆ.
ದಿನಾಂಕ ೧೭ ರಂದು ರವಿವಾರ ಮುಂಜಾನೆ ೮-೦೦ ಕ್ಕೆ ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ದೇವರಿಗೆ ರುದ್ರಾಭಿಷೇಕ ನಡೆದು ಸಕಲ ವಾದ್ಯ-ಮೇಳದೊಂದಿಗೆ ಕಳಸದ ಮೆರವಣಿಗೆ. ನಂತರ ಗೋಪುರಕ್ಕೆ ಕಳಸಾರೋಹಣ, ಮುಂಜಾನೆ ೧೧-೦೦ ಕ್ಕೆ ಶ್ರೀ ಮಾರುತಿದೇವರ ಪಲ್ಲಕಿಯನ್ನು ಶ್ರೀ ವಿರುಪಾಕ್ಷಗೌಡ ದಾದ್ಮಿಯವರ ಹೊಲದಿಂದ ದೇವಸ್ಥಾನಕ್ಕೆ ಕರೆತರಲಾಗುವದು. ನಂತರ ಹೊಳೆಯಿಂದ ತಂದ ನೀರನ್ನು ದೇವರಿಗೆ ಸ್ನಾನ ಮಾಡಿಸುವುದು. ಮಧ್ಯಾಹ್ನ ೧೨-೦೦ ಘಂಟೆಗೆ ಪೂಜಾರಿಗಳಿಂದ ವಿಶಿಷ್ಟವಾದ ಹತಾರ ಸೇವೆ ನಡೆಯುವದು.
ಅಂದು ಸಾಯಂಕಾಲ ೪-೦೦ ಕ್ಕೆ ಪೂಜಾರಿ ಮನೆಯಿಂದ ‘ಮಾವಿನ ಮರತಪ್ಪ’ ಎಂಬ ಹನಮಂತ ದೇವರ ಮೂರ್ತಿಯನ್ನು ಗುಡಿಗೆ ತರಲಾಗುತ್ತದೆ. ಸಾಯಂಕಾಲ ೫-೦೦ ಕ್ಕೆ ವಿಶಿಷ್ಟ ರೀತಿಯ ಹತಾರ ಸೇವೆಯೊಂದಿಗೆ ಇದೇ ಸಂದರ್ಭದಲ್ಲಿ ಸುತಕಾಯಿ (ತೆಂಗಿನಕಾಯಿ) ಒಡೆಯುವ ಕಾರ್ಯ ನಡೆಯುವುದು. ನಂತರ ಹನಮಂತ ದೇವರ ಪೂಜಾರಿಯು ಭರಮದೇವರ ಕಟ್ಟೆಯ ಮೇಲೆ ನಿಂತು ಹತಾರ ಸೇವೆ ಆದ ನಂತರ ಭವಿಷ್ಯದ ಮಳೆ, ಬೆಳೆಗಳ ಬಗ್ಗೆ ಹೇಳಿಕೆ ನಡೆಯುವದು.
ದಿನಾಂಕ ೧೮-೦೯-೨೦೨೩ ಸೋಮವಾರ ಮುಂಜಾನೆ ೯-೦೦ ಘಂಟೆಗೆ ಶ್ರೀ ಮ.ಘ.ಚ. ರುದ್ರಮುನಿ ಶಿವಾಚಾರ್ಯರು ಹಡಗಲಿ, ನಿಡಗುಂದಿ ಹಾಗೂ ಆಳಂದ, ನಂದವಾಡಗಿ ಮತ್ತು ಜಾಲವಾದ ಮ.ನಿ.ಪ್ರ. ಮಹಾಂತಲಿAಗ ಶಿವಾಚಾರ್ಯರು ಇವರ ಸಾನಿಧ್ಯದಲ್ಲಿ ಬಸವೇಶ್ವರನಿಗೆ ರುದ್ರಾಭಿಷೇಕ ಹಾಗೂ ಬಸವ ಪಟ ಏರಿಸುವುದು.ಮಧ್ಯಾಹ್ನ ೩-೦೦ ಭಾವಚಿತ್ರ ಮೆರವಣಿಗೆ ಹಾಗೂ ಹುಚ್ಚಯ್ಯ ಎಳೆಯುವ ಕಾರ್ಯಕ್ರಮ ನಡೆಯುವುದು. ಸಂಜೆ ೬-೦೦ ಕ್ಕೆ ಸಕಲ ವಾದ್ಯ-ಮೇಳಗಳೊಂದಿಗೆ ಬಸವೇಶ್ವರ ರಥೋತ್ಸವ ಜರುಗುವುದು. ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಸಕಲ-ಸದ್ಭಕ್ತರು ಪಾಲ್ಗೊಂಡು ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಗ್ರಾಮಸ್ಥರ ಪರವಾಗಿ ಸ್ಥಳೀಯ ಸ್ವಾಮಿ ವಿವೇಕಾನಂದ ಯುವಕ ಮಂಡಳದ ಸದಸ್ಯ ಹಾಗೂ ಪತ್ರಕರ್ತ ಜಗದೀಶ ಹದ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.