ಬಾಗಲಕೋಟೆ
ಎಗ್ ರೈಸ್ ಹಾಗೂ ಕಬಾಬ್ ಗಾಗಿ ಅಂಗಡಿಯವೊಂದಕ್ಕೆ ಬಂದು ಯುವಕಯೊಬ್ಬ ಅಂಗಡಿಯಲ್ಲಿ ಕಬಾಬ್ ಇಲ್ಲದಕ್ಕೆ ಸಿಟ್ಟಿನಿಂದ ಆ ಅಂಗಡಿ ಮಾಲೀಕನನ್ನೇ ಚಾಕುವಿನಿಂದ ಚುಚ್ಚಿ ಕೊಲೆಗೈದ ಘಟನೆ ಜಿಲ್ಲೆಯ ಅಮೀನಗಡದಲ್ಲಿ ನಡೆದಿದೆ.
ಗೈಬುಸಾಬ ಮುಲ್ಲಾ (29) ಕೊಲೆಯಾದ ಎಗ್ ರೈಸ್ ಅಂಗಡಿ ಮಾಲೀಕ. ಮುಸ್ತಾಕ್ ಜಂಗಿ (23) ಕೊಲೆ ಮಾಡಿದ ಆರೋಪಿ.
ಭಾನುವಾರ ಸಂಜೆ ಎಗ್ ರೈಸ್ ತಿನ್ನಲು ಅಂಗಡಿಗೆ ಬಂದ ಮುಸ್ತಾಕ್ ಜಂಗಿ ಎಗ್ ರೈಸ್ ತಿಂದಿದ್ದಾನೆ. ನಂತರ ಕಬಾಬ್ ಚಿಕನ್ ಕೇಳಿದಾಗ ಅಂಗಡಿಯಲ್ಲಿ ಇಲ್ಲ ಎಂಬ ಉತ್ತರ ಬಂದಿದೆ. ಇದಕ್ಕೆ ಸಿಟ್ಟಿನಿಂದ ಮುಸ್ತಾಕ್, ಮಾಲೀಕನೊಂದಿಗೆ ವಾಗ್ವಾದ ಮಾಡಿ ಅಲ್ಲಿಂದ ತೆರಳಿದ್ದಾನೆ.
ಘಟನೆ ನಡೆದ ಒಂದು ಗಂಟೆ ನಂತರ ಪುನಃ ಅಂಗಡಿಗೆ ಬಂದ ಮುಸ್ತಾಕ್ ಮತ್ತೆ ಅದೇ ಎಗ್ ರೈಸ್ ಅಂಗಡಿ ಮಾಲಿಕನೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಮುಸ್ತಾಕ್ ನೊಂದಿಗೆ ಇದ್ದ ಮತ್ತೊಬ್ಬ ಜಗಳ ಮಾಡಬೇಡಿ ಎಂದು ತಿಳಿ ಹೇಳಿದ್ದಾನೆ.
ಹೀಗಿದ್ದರೂ ಸಿಟ್ಟಿನ ಭರದಲ್ಲಿ ಮುಸ್ತಾಕ್ ತನ್ನಲ್ಲಿ ಇದ್ದ ಚಾಕುವಿನಿಂದ ಗೈಬು ಸಾಬ್ ಮುಲ್ಲಾ ಅವರ ಕುತ್ತಿಗೆಗೆ ಇರಿದಿದ್ದಾನೆ. ಬುದ್ಧಿ ಹೇಳಲು ಹೋದ ಮತ್ತೊಬ್ಬನಿಗೂ ಹೊಟ್ಟೆಗೆ ಗಾಯ ಮಾಡಿದ್ದಾನೆ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗೈಬು ಸಾಬ್ ಮುಲ್ಲಾ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಅಸುನೀಗಿದ್ದಾನೆ.
ರಾಜ್ಯ ಹೆದ್ದಾರಿಯ ಬಸ್ ನಿಲ್ದಾಣದ ಪಕ್ಕದಲ್ಲಿ ಈ ಘಟನೆ ನಡೆದಿದ್ದು ಇಡೀ ಅಮೀನಗಡವನ್ನು ಬೆಚ್ಚಿ ಬೀಳಿಸುವಂತಾಗಿತ್ತು. ತಡರಾತ್ರಿವರೆಗೂ ಜನ ಬಸ್ ನಿಲ್ದಾಣದ ಸುತ್ತಮುತ್ತ ಸುಳಿವುವಂತಾಗಿತ್ತು. ಆರೋಪಿಯ ಪತ್ತೆಗಾಗಿ ಪೊಲೀಸರು ರಾತ್ರಿ ಇಡಿ ಹುಡುಕಾಟ ನಡೆಸಿದರು.
ಚೇಜ್ ಮಾಡಿ ಹಿಡಿದರು
ರಾತ್ರಿಯಿಎಈ ಮುಕ್ಕಾಂ ಹೂಡಿದ್ದ ಹನುಗುಂದ್ ಸಿಪಿಐ ಗುರುಶಾಂತ್ ದಾಶಾಳ, ಬೆಳಗ್ಗೆ ಪರಸ್ಥಿತಿ ತಿಳಿಯಲು ಬಂದಿದ್ದ ಎಸ್ ಪಿ ಅಮರನಾಥ ರೆಡ್ಡಿ ಕೂಡಲೇ ಆರೋಪಿಯನ್ನು ಪತ್ತೆ ಹಚ್ಚುವಂತೆ ಸ್ಥಳೀಯ ಪೊಲೀಸರಿಗೆ ತಾಕೀತು ಮಾಡಿದ್ದರು.
ಎಸ್ ಪಿ ಹಾಗೂ ಸಿಪಿಐ ಸ್ಥಳದಿಂದ ತೆರಳುತ್ತಿದ್ದಂತೆ ಇತ್ತ ಪೊಲೀಸರಿಗೆ ಆರೋಪಿ ಇರುವ ಜಾಗದ ಮಾಹಿತಿ ತಿಳಿದಿದೆ. ಕೂಡಲೇ ಅಲರ್ಟ್ ಆದ ಪೊಲೀಸರು ಎಸ್ಐ ಶಿವಾನಂದ್ ಸಿಂಗನ್ನವರ್ ನೇತೃತ್ವದಲ್ಲಿ ಆರೋಪಿ ಇರುವ ಜಾಗಕ್ಕೆ ತೆರಳಿದ್ದಾರೆ.
ಪೊಲೀಸರನ್ನು ಕಂಡಾಕ್ಷಣ ಆರೋಪಿ ಮುಸ್ತಾಕ್ ಜಂಗಿ ಅವರಿಂದ ತಪ್ಪಿಸಿಕೊಳ್ಳಲು ತೀವ್ರ ಹರಸಾಹಸಪಟ್ಟನು. ಸಿಜಿಮಿಯ ರೀತಿಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದನು. ಆರೋಪಿಯ ಬೆನ್ನಟ್ಟಿದ ಪೊಲೀಸರು ಚೇಜ್ ಮಾಡಿ ಬಂಧಿಸುವಲ್ಲಿ ಯಶಸ್ವಿಯಾದರು.
ಕೊಲೆ ಆರೋಪದಲ್ಲಿ ಬಂಧಿಸಲ್ಪಟ್ಟ ಆರೋಪಿ ಮುಸ್ತಾಕ್ ಜಂಗಿ ಮೇಲೆ ಹಲವು ಪ್ರಕರಣಗಳು ದಾಖಲಿವೆ ಎಂಬ ಮಾಹಿತಿಯೂ ಇದೆ.