ಬಾಗಲಕೋಟೆ
ಹಲವು ವಿಶೇಷತೆಯಿಂದ ಕೂಡಿರೂವ ಬಾಗಲಕೋಟೆಯಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ. ಪ್ರತಿಯೊಂದು ಕಾರ್ಯಕ್ರಮಗಳು ಸೌಹಾರ್ದತೆಯಿಂದ ನಡೆಯುವ ಮೂಲಕ ಬಾಗಲಕೋಟೆ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಯುವ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.
ನಗರದ ವಿವಿಧ ಗಜಾನನ ಉತ್ಸವ ಮಂಡಳಿಗಳಿಗೆ ಭೇಟಿ ನೀಡಿ ಫೌಂಡೇಶನ್ ದಿಂದ ತಲಾ 5 ಸಾವಿರ ಪ್ರೋತ್ಸಾಹಧನ ನೀಡಿ ಅವರು ಮಾತನಾಡಿದರು.
ಬಾಗಲಕೋಟೆಯ ಹೋಳಿ ದೇಶಕ್ಕೆ ಮಾದರಿಯಾಗಿದೆ. ಹಾಗೆಯೆ ಇಲ್ಲಿನ ಗಣೇಶ ಉತ್ಸಹ ಕೂಡ ಹಲವು ವರ್ಷಗಳಿಂದ ಸಂಭ್ರಮದಿಂದ ನಡೆಯುತ್ತಿದೆ. ಬಾಗಲಕೋಟೆ ಶಹರ ಗಜಾನನ ಉತ್ಸವ ಮಂಡಳಿಯವರು, ಲೋಕಕಲ್ಯಾಣಕ್ಕಾಗಿ ವಿವಿಧ ರೀತಿಯ ಸಮಾಜಮುಖಿ ಕಾರ್ಯ ನಡೆಸಿ ಗಮನ ಸೆಳೆಯುತ್ತಾರೆ. ಇಂತಹ ಕಾರ್ಯಗಳು ನಿರಂತರವಾಗಿ ನಡೆಯಬೇಕು.
ಧಾರ್ಮಿಕ ಕಾರ್ಯಕ್ರಮಗಳು, ನಮ್ಮಲ್ಲಿನ ಭೌತಿಕ ಅಂತರ ಕಳೆದು, ಎಲ್ಲರನ್ನೂ ಒಂದಾಗಿ ಮಾಡುತ್ತವೆ ಎಂದರು.
ವಿಘ್ನನಿವಾರಕನೆಂದೇ ಕರೆಯುವ ಗಣೇಶ, ಸರ್ವರ ಬಾಳಿನ ವಿಘ್ನ ನಿವಾರಿಸಲಿ. ಬರದಿಂದ ರೈತರು ಸಂಕಷ್ಟದಲ್ಲಿದ್ದು, ಉತ್ತಮ ಮಳೆಯಾಗುವ ಮೂಲಕ ರೈತರ ಸಂಕಷ್ಟ ದೂರಾಗಲಿ ಎಂದು ಪ್ರಾರ್ಥಿಸಿದರು.
ಬಾಗಲಕೋಟೆ ನಗರ, ವಿದ್ಯಾಗಿರಿ ಹಾಗೂ ನವನಗರ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಿದ ನೂರಕ್ಕೂ ಹೆಚ್ಚು ಗಜಾನನ ಉತ್ಸವ ಮಂಡಳಿಗಳಿಗೆ ತಲಾ 5 ಸಾವಿರ ಪ್ರೋತ್ಸಾಹಧನ ವಿತರಿಸಲಾಯಿತು.
ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ, ಕಾಮಧೇನು ಸಂಸ್ಥೆಯ ಅಧ್ಯಕ್ಷ ರವಿ ಕುಮಟಗಿ, ಮುಖಂಡರಾದ ಶಿವಕುಮಾರ ಮೇಲ್ನಾಡ, ರಾಜು ಗೌಳಿ, ವಿಜಯ ಸುಲಾಖೆ, ಗುರು ಅನಗವಾಡಿ, ಬಸವರಾಜ ಕಳಸಾ, ನಾಗರಾಜ ಕೆರೂರ, ಅರುಣ ಲೋಕಾಪುರ, ವಿರುಪಾಕ್ಷಿ ಅಮೃತಕರ ಮುಂತಾದವರು ಉಪಸ್ಥಿತರಿದ್ದರು.