ಬಾಗಲಕೋಟೆ:
ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಹಾಗೂ (ಟಿಎಸ್‌ಪಿ) ಗಿರಿಜನ ಉಪಯೋಜನೆಯಡಿ ವಿವಿಧ ಇಲಾಖೆಗಳಿಗೆ ನೀಡಲಾಗಿರುವ ಅನುದಾನ ಯಾವುದೇ ಕಾರಣಕ್ಕೂ ದುರಪಯೋಗವಾಗಬಾರದು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಹಳೆಯ ಸಭಾಂಗಣದಲ್ಲಿ ಸೋಮವಾರದಂದು ಜರುಗಿದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಇಲಾಖೆವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೇ ತಲುಪಬೇಕು. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತಾಗಬಾರದು. ಯಾವುದೇ ಇಲಾಖೆಯಲ್ಲಿ ಈ ಅನುದಾನ ದುರಪಯೋಗವಾದರೂ ಆ ಇಲಾಖೆಯ ಅಧಿಕಾರಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನ ಬಳಕೆ ಮಾಡದಿದ್ದಲ್ಲಿ ಕೂಡ ಕ್ರಮ ಕೈಗೊಳ್ಳಲಾಗುವುವುದರಿಂದ ಅಧಿಕಾರಿಗಳು ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು.
ಫಲಾನುಭವಿಗಳ ಆಯ್ಕೆಯನ್ನು ಆಯಾ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಮಾಡಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ ಸಭೆಗೆ ಮಾಹಿತಿ ನೀಡಿ ಜಿಲ್ಲಾ ತೋಟಗಾರಿಖೆ ಇಲಾಖೆಗೆ ಪ್ರಧಾನ ಮಂತ್ರಿ ಕೃಷಿ ಸಂಚಾಯಿ ಯೋಜನೆಯಡಿ ರೂ. 15.19 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ರೂ. 11.07 ಲಕ್ಷ ಹಾಗೂ ಟಿ ಎಸ್ ಪಿ ಯಲ್ಲಿ 23.90 ಲಕ್ಷಗಳ ಅನುದಾನ ಬಿಡುಗಡೆಯಾಗಿರುತ್ತದೆ. 23.16 ಲಕ್ಷಗಳ ಖರ್ಚು ಭರಿಸಿದ ಅನುದಾನಕ್ಕೆ ಸಂಬAಧಿಸಿದAತೆ ಫಲಾನುಭವಿಗಳ ಯಾದಿಯನ್ನು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸಲ್ಲಿಸಬೇಕಾಗಿರುತ್ತದೆ. ಆದರೆ ಇಲ್ಲಿಯವರೆಗೂ ತೋಟಗಾರಿಕೆಯಿಂದ ಮಾಹಿತಿ ಸಲ್ಲಿಕೆಯಾಗಿರುವದಿಲ್ಲ. ಅದೇ ರೀತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಜೆ ಎಸ್ ವಾಯ್ ಸೌಲಭ್ಯ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಯಾದಿಯನ್ನು ಸಲ್ಲಿಸಿರುವದಿಲ್ಲ. ಜಿಲ್ಲಾಧಿಕಾರಿಯವರ ನಿರ್ದೇಶನ ಮೇರೆಗೆ ಪ್ರತಿ ತಿಂಗಳು ತಾಲೂಕು ಮಟ್ಟದಲ್ಲಿ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಸಭೆಯನ್ನು ಜರುಗಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಶಾಸಕರಾದ ಹೆಚ್.ವಾಯ್ ಮೇಟಿ, ಜಗದೀಶ ಗುಡುಗುಂಟಿ, ಬಿ.ಬಿ.ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಮ್. ಸಿ ಇ ಒ ಶಶಿದರ ಕುರೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಸಿನ್ನಾಳಕರ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.