ವಿಜಯಪುರ
ಜನಪರ ಕಾರ್ಯಗಳ ಮೂಲಕ ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಎಲ್ಲ ಗ್ರಾಮ ಪಂಚಾಯಿತಿಗಳ ಸಾಧನೆಗಳು ಹೆಮ್ಮೆ ತರಿಸಿದೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿಜಯಪುರ ಜಿಲ್ಲೆಯ ಆಹೇರಿ, ಮುತ್ತಗಿ, ನಾಗರಬೆಟ್ಟ, ಯಂಕಂಚಿ, ಚವಡಿಹಾಳ, ಬಿಜ್ಜರಗಿ, ಹೊನಗನಹಳ್ಳಿ, ಕೂಡಗಿ, ಆಲಮಟ್ಟಿ, ಮಿಣಜಗಿ, ರಾಮನಹಳ್ಳಿ, ಚಿಕ್ಕರೂಗಿ ಮತ್ತು ನಿವರಗಿ ಗ್ರಾಮ ಪಂಚಾಯಿತಿಗಳು ಈ ಬಾರಿ ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಈ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಮಾಡಿರುವ ಮಾದರಿ ಕೆಲಸಗಳು ಮತ್ತು ಇವುಗಳ ಯಶಸ್ಸಿಗೆ ಗ್ರಾಮಸ್ಥರ ನೀಡಿರುವ ಸಂಪೂರ್ಣ ಸಹಕಾರ ಶ್ಲಾಘನೀಯವಾಗಿದೆ. ಈ ಗ್ರಾಮಗಳ ಜನತೆ, ಗ್ರಾ. ಪಂ. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳನ್ನು ನೋಡಲು ನಾನೂ ಕೂಡ ಉತ್ಸುಕನಾಗಿದ್ದೇನೆ. ಶೀಘ್ರದಲ್ಲಿಯೇ ಅಲ್ಲಿಗೆ ಭೇಟಿ ನೀಡುತ್ತೇನೆ. ಅವುಗಳ ಅಭಿವದ್ಧಿಗೆ ಅಗತ್ಯ ನೆರವು ಒದಗಿಸಲು ಸರಕಾರದ ಮಟ್ಟದಲ್ಲಿ ಕೆಲಸ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.
ಅದೇ ರೀತಿ, ಇನ್ನುಳಿದ ಗ್ರಾಮ ಪಂಚಾಯಿತಿಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಈ ಗ್ರಾಮ ಪಂಚಾಯಿತಿಗಳು ಕೂಡ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ. ಇವುಗಳಿಗೂ ಗಾಂಧಿ ಪುರಸ್ಕಾರ ಸಿಗುವಂತಾಗಲಿ. ಈ ಗ್ರಾಮಗಳ ಸಾರ್ವಜನಿಕರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗ್ರಾಮದ ಅಭಿವೃದ್ಧಿಗೆ ಕೈಗೊಳ್ಳುವ ಕೆಲಸ ಕಾರ್ಯಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ. ಈ ನಿಟ್ಟಿನಲ್ಲಿ ಯಾವುದೇ ಕೆಲಸಗಳಿದ್ದರೂ ಯಾವಾಗ ಬೇಕಾದರೂ ನನ್ನನ್ನು ಸಂಪರ್ಕಿಸಬಹುದು. ಹಗಲಿರುಳು ತಮ್ಮ ಸೇವೆಗೆ ಸಿದ್ಧನಿದ್ದೇನೆ ಎಂದು ಅವರು ತಿಳಿಸಿದ್ದಾರೆ.