ಬಾಗಲಕೋಟೆ
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 9 ಗ್ರಾಮ ಪಂಚಾಯತಿಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರರಾಗುವ ಮೂಲಕ ಗ್ರಾಮದ ಹಿರಿಮೆಯನ್ನು ಹೆಚ್ಚಿಸಿವೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಗ್ರಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿ ಪ್ರಶಸ್ತಿ ಪಡೆದುಕೊಂಡ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾದ್ಯಕ್ಷರು ಹಾಗೂ ಪಂಚಾಯತ ಅಭಿವೃದ್ದಿ ಅಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವುದು ಸಂತೋಷದ ವಿಷಯ. ಪ್ರಶಸ್ತಿಗೆ ಪಾತ್ರರಾಗಿ ಗ್ರಾಮದ ಹಿರಿಮೆಯನ್ನು ಹೆಚ್ಚಿಸಿದ್ದಿರಿ ಎಂದರು.
ಗ್ರಾಮ ಮಟ್ಟದಲ್ಲಿ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ದಾಟಿ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಿರಿ. ಗ್ರಾಮ ಪಂಚಾಯತಿಗೆ ಬಂದಂತಹ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ ಅಭಿವೃದ್ದಿ ಕೆಲಸ ಮಾಡಿರುವುದರಿಂದ ಮಹತ್ವ ಬರುತ್ತದೆ. ಇದರ ಜೊತೆಗೆ ಗ್ರಾಮದ ಅಭಿವೃದ್ದಿ ಇತರೆ ಕೆಲಸಗಳನ್ನು ಸಹ ಮಾಡಲು ಸಲಹೆ ನೀಡಿದರು. ಒಂದು ಗ್ರಾಮ ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಸ್ವಚ್ಛತೆವಾಗಿದ್ದರೆ ಅಭಿವೃದ್ದಿ ಕಂಡಿತ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಗ್ರಾ.ಪಂ ಅಧ್ಯಕ್ಷರು, ಉಪಾದ್ಯಕ್ಷರು ಹಾಗೂ ಸದಸ್ಯರು ಶಾಲೆಗಳ ಪರಿಶೀಲನೆ ನಡೆಸಿ ಮಕ್ಕಳಿಗೆ ಉತ್ತಮ ಪರಿಸರದ ಜೊತೆಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಲು ತಿಳಿಸಿದರು.
ಗಾಂಧಿ ಗ್ರಾಮ ಪುರಸ್ಕಾರ ಪಡೆದ ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮ ಪಂಚಾಯತಿಯ ಉಪಾದ್ಯಕ್ಷೆ ಶಕುಂತಲಾ ಸೋನಾನೆ ಮಾತನಾಡಿ ಗ್ರಾಮದಲ್ಲಿ ಉತ್ತಮ ಸಿಸಿ ರಸ್ತೆ, ಕಸ ತ್ಯಾಜ್ಯ ನಿರ್ವಹಣೆ, ರೈತರಿಗಾಗಿ ನಮ್ಮ ಹೊಲ ನಮ್ಮ ರಸ್ತೆಯಡಿ ರಸ್ತೆ ನಿರ್ಮಾಣ, ಶುದ್ದ ಕುಡಿಯುವ ನೀರು, ಮಹಿಳೆಯರಿಂದ ಪ್ರತಿದಿನ ಕಸ ಸಂಗ್ರಹಣೆ ಸೇರಿದಂತೆ ಸರಕಾರ ಯೋಜನೆಗಳನ್ನು ಅನುಷ್ಠಾನ ಮಾಡಿದ್ದರಿಂದ ಪುರಸ್ಕಾರಕ್ಕೆ ಪಾತ್ರವಾಗಿದೆ. ಈ ಪುರಸ್ಕಾರ, ಜಿ.ಪಂ ವತಿಯಿಂದ ಸನ್ಮಾನಿ ಮಾಡಿದ್ದು, ಇನಷ್ಟು ಜವಾಬ್ದಾರಿ ಹೆಚ್ಚಾಗಿದ್ದು, ಗ್ರಾಮದ ಸುಧಾರಣೆಗೆ ಶ್ರಮಿಸುವುದಾಗಿ ತಿಳಿಸಿದರು.
ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾದ ನೀರಲಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ರಂಗಪ್ಪ ಪೂಜಾರಿ ನಮ್ಮ ಗ್ರಾಮದಲ್ಲಿ ಕೂಲಿ ಕಾರ್ಮಿಕರು ಹೆಚ್ಚಾಗಿದ್ದು, ಅವರಿಗೆ ಶೇ.100 ರಷ್ಟು ಕೂಲಿ ನೀಡಲಾಗಿದೆ. ಗ್ರಾಮದ ಮೂಲಭೂತ ಸೌಲಭ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸ್ವಚ್ಛತೆಗೆ ಎಲ್ಲರ ಸಹಕಾರ ದೊರೆಯಿತು. ಇದರಿಂದ ಎರಡು ಅವಧಿಯ ಅಧಿಕಾರದಲ್ಲಿಯೂ ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ ಎಂದರು.
ನೀರಲಕೇರಿ ಪಂಚಾಯತ ಅಭಿವೃದ್ದಿ ಅಧಿಕಾರಿ ರತ್ನಾಬಾಯಿ ಮೂಖಿ ಮಾತನಾಡಿ ನರೇಗಾದಡಿ ಗ್ರಾಮ ಮುಂಚೂಣಿಯಲ್ಲಿದೆ. ನೀರು ಸರಬರಾಜು, ಸ್ವಚ್ಛತೆ ಆದ್ಯತೆ, ನೂರಕ್ಕೆ ನೂರರಷ್ಟು ಕರ ವಸೂಲಿ, ಸರಕಾರಿ ಸೌಲಭ್ಯ ಸಾರ್ವಜನಿಕರಿಗೆ ಒದಗಿಸುವಲ್ಲಿ ಉತ್ತಮ ಕಾರ್ಯ ಮಾಡಲಾಗಿದೆ. ಪುರಸ್ಕಾರ ದೊರೆತ ಹಿನ್ನಲೆಯಲ್ಲಿ ಇನ್ನು ಹೆಚ್ಚಿನ ಕೆಲಸ ಮಾಡಲು ಉತ್ತೇಜನ ದೊರೆತಂತಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಯೋಜನಾಧಿಕಾರಿ ಡಾ.ಬಿ.ಆರ್.ಪುನಿತ್, ಯೋಜನಾಧಿಕಾರಿ ಎನ್.ವಾಯ್.ಬಸರಿಗಿಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮ ಉಕ್ಕಲಿ, ಬಾದಾಮಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶಿಲ್ಪಾ ಹಿರೇಮಠ ಉಪಸ್ಥಿತರಿದ್ದರು.
*ಬೀದಿ ಬದಿ ವ್ಯಾಪಾರಿಗಳೊಂದಿಗೆ ಸಂವಾದ*
———————————–
ಬಾಗಲಕೋಟೆ: ಪಿಎಮ್ ಸ್ವ-ನಿಧಿ ರಾಜ್ಯ ಸಂಯೋಜಕರಾದ ಎಸ್.ಎ.ರಾಮದಾಸ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ 12 ರಂದು ಮಧ್ಯಾಹ್ನ 3 ಗಂಟೆಗೆ ನಗರಸಭೆ ಬಾಗಲಕೋಟೆ ಹೊಸ ಸಭಾಭವನದಲ್ಲಿ ಬೀದಿ ಬದಿ ವ್ಯಾಪಾರಸ್ಥರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಬಿಟಿ ಮೂಲಕ ಪಿಂಚಣಿ : ಆಧಾರ ಸೀಡಿಂಗ್ ಮಾಡಿಕೊಳ್ಳಿ
————————————————-
ಬಾಗಲಕೋಟೆ: ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನಿರ್ದೇಶನದಂತೆ ಅಕ್ಟೋಬರ-2023ರ ಮಾಹೆಯಿಂದ ಫಲಾನುಭವಿಗಳ ವಿವಿಧ ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿಗಳ ಪಾವತಿಯನ್ನು ಆಧಾರ ಆಧಾರಿತ ನೇರ ಹಣ ಸಂದಾಯ (ಡಿಬಿಟಿ) ಯೋಜನೆಯಡಿ ಪಿಂಚಣಿ ಪಾವತಿಗೆ ಕ್ರಮವಹಿಸಲಾಗುತ್ತಿದೆ.
ಪಿಂಚಣಿದಾರರು ಪಿಂಚಣಿ ಪಡೆಯುತ್ತಿರುವ ಬ್ಯಾಂಕ್, ಪೋಸ್ಟ ಕಚೇರಿಯಲ್ಲಿ ಆಧಾರ ಸೀಡಿಂಗ್, ಎನ್.ಪಿ.ಸಿ.ಐ ಮ್ಯಾಪಿಂಗ್, ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಜಿಲ್ಲೆಯಲ್ಲಿ ಬಾದಾಮಿ ತಾಲೂಕಿನಲ್ಲಿ 1484, ಬಾಗಲಕೋಟೆ 1615, ಬೀಳಗಿ 327, ಗುಳೇದಗುಡ್ಡ 722, ಹುನಗುಂದ 876, ಇಲಕಲ್ಲ 1577, ಜಮಖಂಡಿ 2023, ಮುಧೋಳ 1416 ಹಾಗೂ ರಬಕವಿ-ಬನಹಟ್ಟಿ 1592 ಆಧಾರ ಸೀಡಿಂಗ್‍ಗೆ ಬಾಕಿ ಉಳಿದಿರುತ್ತವೆ. ಕಾಲಾವಕಾಶ ಕಡಿಮೆ ಇರುವದರಿಂದ ಆಧ್ಯತೆ ಮೇರೆ ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ಫಲಾನುಭವಿಗಳು ಕೂಡಲೇ ಎನ್.ಪಿ.ಸಿ.ಎಲ್‍ಗೆ ಲಿಂಕ್ ಮಾಡಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.