ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿರುವ ಮಾಸ್ ಲೀಡರ್ ಹಾಗೂ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇದೀಗ ಸುರಕ್ಷತೆಯ ದೃಷ್ಟಿಯಿಂದ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ಮೊದಲು ರಾಜ್ಯ ಸರಕಾರದಿಂದ ಅವರಿಗಿದ್ದ ಕೆಎಸ್ಆರ್ ಭದ್ರತೆಯನ್ನು ನೀಡಲಾಗಿತ್ತು. ಅದಕ್ಕೂ ಹೆಚ್ಚಿನದ್ದಾಗಿರುವ ಝಡ್ ಶ್ರೇಣಿಯ ಭದ್ರತೆಯನ್ನು ಕೇಂದ್ರ ಸರ್ಕಾರದ ಗೃಹ ಇಲಾಖೆಯ ಆದೇಶದಂತೆ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿರುವಂತೆ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ತುಕಡಿಯು ಬಿಜೆಪಿ ಹಿರಿಯ ನಾಯಕನ ಕಾವಲಿಗೆ ಇರಲಿದೆ. ಯಾವುದೇ ಒಬ್ಬ ವ್ಯಕ್ತಿಯು ಝಡ್ ಭದ್ರತೆಯನ್ನು ಪಡೆದರೆ, ಅವರಿಗೆ ಒಟ್ಟು 22 ಸಿಬ್ಬಂದಿಗಳ ತಂಡ ರಕ್ಷಣೆ ನೀಡುತ್ತದೆ. ಈ ಭದ್ರತಾ ತಂಡದಲ್ಲಿ ಸಿವಿಲ್ ಪೊಲೀಸ್ ಸಿಬ್ಬಂದಿ ಮತ್ತು ಕನಿಷ್ಠ 4 ರಿಂದ 5 ರಾಷ್ಟ್ರೀಯ ಭದ್ರತಾ ಸಿಬ್ಬಂದಿಗಳು (ಎನ್ಎಸ್‌ಜಿ) ಇರಲಿದ್ದಾರೆ.
ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿ ಹಾಗೂ ಕೇಂದ್ರ ಚುನಾವಣೆ ಸಮಿತಿ ಸದಸ್ಯರನ್ನಾಗಿಯೂ ಆಯ್ಕೆ ಮಾಡಿದೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಪ್ರಭಾವೀ ನಾಯಕರಿರುವ ಅವರಿಗೆ ಗುಪ್ತಚರ ಬ್ಯುರೋದ ವರದಿಗಳನ್ವಯ ಅನೇಕ ಬೆದರಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ಈ ರೀತಿಯ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕೆಲವೇ ತಿಂಗಳುಗಳಲ್ಲಿ ರಾಜ್ಯದಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಗಾಗಿ ಯಡಿಯೂರಪ್ಪ ಅವರು ಪಕ್ಷದ ಕಾರ್ಯಚಟುವಟಿಕೆ ಹಾಗೂ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆಯ ಅಗತ್ಯ ಇತ್ತು ಎಂಬ ಮಾತುಗಳೂ ಕೇಳಿಬಂದಿದ್ದವು.
ಮುಖ್ಯವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಬಿಜೆಪಿಗೆ ಯಡಿಯೂರಪ್ಪ ನಾಯಕತ್ವ ಅನಿವಾರ್ಯವಾಗಿತ್ತು. ಆದರೆ ರಾಜ್ಯ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕನಿಗೆ ಪಕ್ಷವು ಅವಧಿ ಪೂರ್ಣಗೊಳ್ಳುವ ಮುನ್ನವೇ ವಯಸ್ಸಿನ ಕಾರಣ ನೀಡಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿತ್ತು.
ಚುನಾವಣೆಯಲ್ಲಿ ಸೋತಿರುವ ಯಾವೊಬ್ಬ ಶಾಸಕರನ್ನು ಕೈ ಬಿಡದೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡು ಪಕ್ಷವನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಮೊದಲ ಭಾಗವಾಗಿ ಬಹಿರಂಗವಾಗಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಸರ್ಕಾರದ ವಿಫಲತೆಗಳನ್ನು ಎತ್ತಿ ತೋರಿಸಿ, ಸರ್ಕಾರ ದಾರಿ ತಪ್ಪುತ್ತಿದೆ ಇದರ ವಿರುದ್ಧ ಪ್ರತಭಟನೆ ನಡೆಸುವುದಾಗಿ ಗುಡುಗಿ ಸಿದ್ದರಾಮಯ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು.
ಅಲ್ಲದೆ ಬಿಜೆಪಿ ತಲೆದೂರಿದ್ದ ಶಾಸಕರ ಆಂತರಿಕ ಭಿನ್ನಮತ ಶಮನಗೊಳಿಸುವಲ್ಲಿ ಹಾಗೂ ಎಲ್ಲರಲ್ಲಿಯ ವೈ ಮನಸ್ಸು ದೂರ ಮಾಡುವ ಮೂಲಕ ಮುಂಬರುವ ಲೋಕ ಸಮರಕ್ಕೆ ಒಗ್ಗಟ್ಟಿನ ಮಂತ್ರ ಜಪಿಸುವಂತೆ ಸಲಹೆ ನೀಡಿದ್ದರು.