ಬಾಗಲಕೋಟೆ
ಕರ್ನಾಟಕ 50ರ ಸಂಭ್ರಮ ಆಚರಣೆ ಹಿನ್ನಲೆಯಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನ ಅಂಗವಾಗಿ ಹಮ್ಮಿಕೊಂಡ ಸ್ಥಬ್ದಚಿತ್ರಗಳ ಪ್ರದರ್ಶನದಲ್ಲಿ ಬಾಗಲಕೋಟೆಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆಯ ಘಟಕ ಪ್ರಥಮ ಸ್ಥಾನ ಪಡೆಯಿತು.
ಜಿಲ್ಲಾಡಳಿತದ ವತಿಯಿಂದ ಬುಧವಾರ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ಥಬ್ದ ಚಿತ್ರಗಳ ಪ್ರದರ್ಶನದಲ್ಲಿ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿರುವ ಶಕ್ತಿ ಯೋಜನೆ ಬಿಂಬಿಸುವ ಸ್ಥಬ್ದ ಚಿತ್ರ ಇದಾಗಿದ್ದು, ರಾಜ್ಯೋತ್ಸವಕ್ಕೆ ಆಗಮಿಸಿದ ಎಲ್ಲರ ಆಕರ್ಷನೆಯ ಕೇಂದ್ರವಾಗಿತ್ತು.
ಪ್ರತಿ ಮನೆಯೊಡತಿಗೆ ತಿಂಗಳಿಗೆ 2 ಸಾವಿರ ರೂ. ನೀಡುವ ‘ಗೃಹಲಕ್ಷ್ಮೀ’ ಯೋಜನೆ ಹಾಗೂ ಇತರೆ ಯೋಜನೆಗಳ ಮಾಹಿತಿಯನ್ನೊಳಗೊಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸ್ಥಬ್ದ ಚಿತ್ರ ದ್ವಿತೀಯ ಸ್ಥಾನ ಪಡೆದುಕೊಂಡಿತು. ಅದರಂತೆ ರೈತರಿಗೆ ಹೆಚ್ಚಿನ ಪ್ರಮಾಣದ ರೇಷ್ಮೆ ಬೆಳೆ ಬಗ್ಗೆ ತಿಳುವಳಿಕೆ ಹಾಗೂ ಮಾಹಿತಿಯನ್ನೊಳಗೊಂಡ ರೇಷ್ಮೆ ಇಲಾಖೆಯ ಮತ್ತು ಕನ್ನಡ ಮಾತೆಯ ವೇಷಭೂಷಣ ಒಳಗೊಂಡ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸ್ಥಬ್ದ ಚಿತ್ರಗಳು ತೃತೀಯ ಸ್ಥಾನ ಪಡೆದುಕೊಂಡವು. ಪ್ರದರ್ಶನದಲ್ಲಿ ಇತರೆ ಇಲಾಖೆಯ ಸ್ಥಬ್ದ ಚಿತ್ರಗಳು ಭಾಗವಹಿಸಿದ್ದವು.
ಪ್ರಾರಂಭದಲ್ಲಿ ಜಿಲ್ಲಾಡಳಿತ ಭವನದ ಎದುರಿಗೆ ಇರುವ ಅಶೋಕ ಸ್ಥಂಬದಿಂದ ಕನ್ನಡಾಂಬೆಯ ಭಾವಚಿತ್ರದ ಅದ್ದೂರಿ ಮೆರವಣಿಗೆಗೆ ಶಾಸಕ ಎಚ್.ವಾಯ್.ಮೇಟಿ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ವಿವಿಧ ಜಾಲಪದ ಕಲಾತಂಡಗಳು, ವಿವಿಧ ಇಲಾಖೆಯವರು ತಯಾರಿಸಿದ ಸ್ತಬ್ದ ಚಿತ್ರಗಳು ಎಲ್ಲರನ್ನು ಆಕರ್ಷಿಸಿದವು. ಮೆರವಣಿಗೆಯು ನವನಗರ ಬಸ್ ನಿಲ್ದಾಣ, ಎಲ್.ಐ.ಸಿ ವೃತ್ತದ ಮೂಲಕ ಹೆಸ್ಕಾಂ ಕಚೇರಿ ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಕ್ಕೆ ಅಂತ್ಯಗೊಂಡಿತು.