ಉಡುಪಿ: ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿಯಾಗಿ ಬೆಳೆಸುತ್ತೇವೆ. ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಇಲ್ಲಿ ಸುವರ್ಣಸೌಧ ಇದೆ, ಏರ್ಪೋರ್ಟ್ ಇದೆ, ಜಿಲ್ಲೆಯ ವಿಸ್ತೀರ್ಣ ದೊಡ್ಡದಾಗಿದೆ. ಅತಿ ಹೆಚ್ಚು ಶಾಸಕರು ಇರುವ ಜಿಲ್ಲೆ ಬೆಳಗಾವಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
68ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಒಂದೆರಡು ದಿನ ವಿಳಂಬ ಆಗಬಹುದು ಅಷ್ಟೇ. ಪ್ರತಿ ತಿಂಗಳು ಖಾತೆಗೆ ಹಣ ಹಾಕುವ ಸಂದರ್ಭದಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು. ಈ ಯೋಜನೆ 1.8 ಕೋಟಿ ಜನರಿಗೆ ಖಂಡಿತವಾಗಿ ತಲುಪುತ್ತಿದೆ ಎಂದಿದ್ದಾರೆ.
ಸುಮಾರು ಎರಡೂವರೆ ಸಾವಿರ ಕೋಟಿ ಹಣ ಪ್ರತಿ ತಿಂಗಳು ಫಲಾನುಭವಿಗಳಿಗೆ ಸಂದಾಯ ಆಗುತ್ತಿದೆ. ಇನ್ನು ಆರೇಳು ಲಕ್ಷ ಜನ ಉಳಿದುಕೊಂಡಿದ್ದಾರೆ. ಅವರಲ್ಲಿ ಎರಡು ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಆರೇಳು ಲಕ್ಷ ಜನ ಉಳಿದುಕೊಂಡಿದ್ದಾರೆ. ಯಾರೆಲ್ಲ ನೋಂದಣಿ ಆಗಬೇಕಾಗಿದೆಯೋ ಅವರನ್ನು ಅಂಗನವಾಡಿ ಕಾರ್ಯಕರ್ತೆಯರು ಮನೆಗೆ ಹೋಗಿ ತಿಳುವಳಿಕೆ ನೀಡಿ ಸೇರ್ಪಡೆಗೊಳಿಸುತ್ತಾರೆ. ಬ್ಯಾಂಕ್ ಅಕೌಂಟ್ ಸಮಸ್ಯೆ ಇದ್ದರೆ, ಅಂಚೆ ಕಚೇರಿಯಲ್ಲಿ ಖಾತೆ ತೆರೆಯುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಎಂಇಎಸ್ ಗಲಾಟೆ ಹಾಗೂ ಮಹಾರಾಷ್ಟ್ರ ಮೀಸಲಾತಿ ಹೋರಾಟದ ಪ್ರಭಾವ ವಿಚಾರ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಈ ವಿಷಯದಲ್ಲಿ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಅಗತ್ಯವಿರುವ ಎಲ್ಲ ಕಾನೂನು ಕ್ರಮಗಳಿಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಈಗ ಗಡಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ ಎಂದಿದ್ದಾರೆ.
ಉಡುಪಿ ಜಿಲ್ಲಾ ಹೆರಿಗೆ ಆಸ್ಪತ್ರೆ ಸಿಬ್ಬಂದಿ ಕೊರತೆ ವಿಚಾರವಾಗಿ ಈಗಾಗಲೇ ಸಚಿವರ ಗಮನಕ್ಕೆ ತಂದಿದ್ದೇವೆ. ಆದಷ್ಟು ಬೇಗ ಸಿಬ್ಬಂದಿ ನೇಮಕ ಆಗುತ್ತೆ. ಇನ್ನು ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಸಲುವಾಗಿ ಈಗಾಗಲೇ ರಾಜ್ಯಾದ್ಯಂತ ಟೆಂಡರ್ ಆಗಿದೆ. ಆದಷ್ಟು ಬೇಗ ಟೆಂಡರ್ ಮುಗಿಸಿ ಮೊಟ್ಟೆ ನೀಡುವ ಕೆಲಸಕ್ಕೆ ಚಾಲನೆ ಕೊಡುತ್ತೇವೆ ಎಂದು ಹೇಳಿದ್ದಾರೆ.