ಕೊಪ್ಪಳ: ಕಾರಟಗಿ ತಾಲ್ಲೂಕಿನ ಬುದಗುಂಪಾದ ರೈತರೊಬ್ಬರಿಗೆ ಆನ್‌ಲೈನ್ ಟೆಲಿಗ್ರಾಂ ಗ್ರೂಪ್ ಮೂಲಕ ಪರಿಚಿತನಾದ ವ್ಯಕ್ತಿಯೊಬ್ಬ ‘ಸ್ಟಾರ್ ಬ್ಯಾನರ್’ ಹೆಸರಿನಲ್ಲಿ ಬೇರೆ ಬೇರೆ ದೇಶಗಳ ಕರೆನ್ಸಿಯನ್ನು ಮಾರಾಟ ಮಾಡಿದರೆ ದೊಡ್ಡ ಮಟ್ಟದಲ್ಲಿ ಲಾಭ ಗಳಿಸಬಹುದು ಎಂದು ನಂಬಿಸಿ ವಂಚನೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ರೈತ ಶರಣಪ್ಪ ಕೆಂಡದ ವಂಚನೆಗೆ ಒಳಗಾದವರು. ಆನ್‌ಲೈನ್ ವಂಚನೆಯ ಜಾಲದಿಂದ ಶರಣಪ್ಪ ಒಟ್ಟು ರೂ.41.47 ಲಕ್ಷ ಹಣವನ್ನು ತಮ್ಮ ಖಾತೆಯಿಂದ ಆ ವ್ಯಕ್ತಿಗೆ ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ಹಲವು ದೇಶಗಳ ಕರೆನ್ಸಿಯನ್ನು ಮಾರಾಟ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಎಂದು ಆ ವ್ಯಕ್ತಿ ಶರಣಪ್ಪ ಅವರನ್ನು ಮೊದಲು ನಂಬಿಸಿದ್ದಾನೆ.
ಬಳಿಕ ಹಂತಹಂತವಾಗಿ ತನ್ನ ಐಸಿಐಸಿಐ ಬ್ಯಾಂಕ್‌ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ.
ಸತತವಾಗಿ ಹಣ ಹಾಕುತ್ತಲೇ ಹೋದರೂ ಮರಳಿ ಲಾಭ ಬಾರದ ಕಾರಣ ಶರಣಪ್ಪ ಅನುಮಾನಗೊಂಡು ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.
ಹಣ ಹಾಕಿಸಿಕೊಂಡ ವ್ಯಕ್ತಿಗೆ ಹಣ ವಾಪಸ್ ಕೊಡುವಂತೆ ಕೇಳಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೂಡಿಕೆ ಬಗ್ಗೆಯೂ ಮಾಹಿತಿ ಕೊಟ್ಟಿಲ್ಲ. ಈ ಕುರಿತು ಕೊಪ್ಪಳ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್‌ಐಆರ್ ದಾಖಲಾಗಿದೆ.