ಬಾಗಲಕೋಟೆ:
ದೇಶದ ಭವಿಷ್ಯ ರೂಪಿಸಲು ಮತದಾನದ ಹಕ್ಕು ಪಡೆಯುವುದು ಅವಶ್ಯವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಮತದಾರರ ಪಟ್ಟಿ ವೀಕ್ಷಕರಾದ ಬಿ.ಬಿ.ಕಾವೇರಿ ಹೇಳಿದರು.
ನವನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶನಿವಾರ ಭೇಟಿ ನೀಡಿ, ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಅಭಿಯಾನ ಕುರಿತು ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಹೆಚ್ಚು ಮಹತ್ವವಿದ್ದು, ಪ್ರತಿಯೊಬ್ಬ ನಾಗರಿಕರು ಮತ ಚಲಾಯಿಸಬೇಕು. ಮತ ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು. ಹೆಸರು ಇರಬೇಕಾದರೆ 18 ವರ್ಷ ಮೇಲ್ಪಟ್ಟವರು ನೊಂದಣಿ ಮಾಡಿಸಬೇಕು. ಎಪಿಕ್ ಕಾರ್ಡ ಪಡೆಯಬೇಕು. ನಂತರ ಚುನಾವಣೆಯಲ್ಲಿ ಮತ ಚಲಾಯಿಸಬೇಕು. ಅಂದಾಗ ಮಾತ್ರ ದೇಶದ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ ಎಂದರು.
ರಾಜ್ಯದ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಮಂತ್ರಿಯನ್ನು ಆಯ್ಕೆ ಮಾಡುವುದು ಮತದಾರರು. ಮತದಾನದ ಮಹತ್ವವನ್ನು ಅರಿತು ಆ ಹಕ್ಕನ್ನು ಪಡೆಯಲು ರಾಜ್ಯ ಚುನಾವಣಾ ಆಯೋಗವು ಅವಕಾಶ ಕಲ್ಪಿಸಿದ್ದು, 18 ವರ್ಷ ಮೇಲ್ಪಟ್ಟ ಯುವಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಮುಂದಾಗಬೇಕು. ಸರಕಾರಿ ಕಾಲೇಜಿನಲ್ಲಿ ಇಷ್ಟೊಂದು ಮಕ್ಕಳು ಇರುವುದು ತುಂಬಾ ಸಂತೋಷದ ವಿಷಯ. ಮಕ್ಕಳು ಗುರಿಯನ್ನು ಇಟ್ಟುಕೊಂಡು ಶ್ರಮ ಪಡುವ ಮೂಲಕ ನಿಮ್ಮ ತಂದೆ ತಾಯಿಯ ಕನಸು ನನಸು ಮಾಡಲು ಮುಂದಾಗಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಮಾತನಾಡಿ ಪ್ರತಿಯೊಬ್ಬ ನಾಗರಿಕನು ಮತದಾನದಿಂದ ವಂಚಿತನಾಗಬಾರದು ಎಂಬುದು ಚುನಾವಣಾ ಆಯೋಗದ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಜವಾಬ್ದಾರಿಯುತ ನಾಗರಿಕರು ಉತ್ತಮ ಪ್ರಜೆಗಳಾಗಬೇಕಾದರೆ ಮತದಾರರ ಪಟ್ಟಿಯನ್ನು ಹೆಸರು ನೊಂದಾಯಿಸಿಕೊಳ್ಳಬೇಕು. ಹೆಸರು ನೊಂದಾವಣೆಗೆ ಹೆಲ್ಪಲೈನ್ ಮೊಬೈಲ್ ಆಪ್, ವಾಟ್ಸಪ್, ಯುಟೂಬ್ ಚಾನಲ್‍ನಲ್ಲಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡಲ್ಲಿ ಬರುವ ತಾಲೂಕಾ, ಜಿಲ್ಲಾ ಪಂಚಾಯತ ಹಾಗೂ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ದೊರೆಯಲಿದೆ ಎಂದರು.
ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ಒಂದು ಮತಕ್ಷೇತ್ರದಿಂದ ಮತ್ತೊಂದು ಮತಕ್ಷೇತ್ರಕ್ಕೆ ವರ್ಗಾವಣೆ, ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಕುರಿತು ವಿವರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ರಾಯಬಾರಿಗಳಾಗಿ ಕೆಲಸ ಮಾಡಲು ತಿಳಿಸಿದರು.
ಈ ಸಂದರ್ಬದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಜಿ.ಜಿ.ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಾಸ್ಮೀನ್ ಕಿಲ್ಲೇದಾರ, ಎಂ.ಎಸ್.ಬಡಸಾನಿ, ಉಪನ್ಯಾಸಕ ಡಾ.ಚಂದ್ರಶೇಖರ ಕಾಳನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.