ಬಾಗಲಕೋಟೆ
ಆಯ್ಕೆ ಮಾಡಲಾದ 60 ಸ್ಮಾರಕಗಳ ಸಂರಕ್ಷಣೆಗೆ ಡಿಸೆಂಬರ 30 ರೊಳಗಾಗಿ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮದಡಿ ಸೋಮವಾರ ಪ್ರವಾಸೋದ್ಯಮ ತಾಣ ಐಹೊಳೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿರುವ ಸ್ಮಾರಕಗಳನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು ಈಗಾಗಲೇ ಭಾರತೀಯ ಪುರಾತತ್ವ ಇಲಾಖೆಯಿಂದ ಅರ್ಧದಷ್ಟು ಸ್ಮಾರಕಗಳ ಸಂರಕ್ಷಣೆಗೆ ತೆಗೆದುಕೊಂಡಿದ್ದು, ರಾಜ್ಯಕ್ಕೆ ಸಂಬಂಧಿಸಿದ 61 ಸ್ಮಾರಕಗಳ ಪೈಕಿ ಈಗಾಗಲೇ ಒಂದಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ 60 ಸ್ಮಾರಕ ಸಂರಕ್ಷಣೆಗೆ ಡಿಸೆಂಬರ 30 ರೊಳಗಾಗಿ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ತಿಳಿಸಿದರು.
ಐಹೊಳೆ ಪ್ರವಾಸಿ ತಾಣಗಳಲ್ಲಿ ಬಹಳಷ್ಟು ದಿನಗಳಿಂದ ಸ್ಮಾರಕಗಳಲ್ಲಿ ಕುಟುಂಬಗಳು ವಾಸವಾಗಿದ್ದಾರೆ. ತಮಗೆ ಬೇಕಾದ ರೀತಿಯಲ್ಲಿ ಅವುಗಳನ್ನು ಉಪಯೋಗಿಸಿಕೊಂಡಿದ್ದು, ಬೇರೆಡೆ ನಿವೇಶನ ನೀಡಿದಲ್ಲಿ ಸ್ಥಳಾಂತವಾಗಲು ಎಲ್ಲ ರೀತಿಯ ಸಹಕಾರ ಸಹ ನೀಡುತ್ತಿದ್ದಾರೆ. ಸ್ಮಾರಕಗಳಲ್ಲಿ ವಾಸವಾಗಿರುವ ಕುಟುಂಬಗಳನ್ನು ಸ್ಥಳಾಂತರಿಸಿ ಅವುಗಳನ್ನು ಅಭಿವೃದ್ದಿಪಡಿಸಲು ಸರಕಾರ ತಿರ್ಮಾನಿಸಿದೆ. ಬರುವ ಜನವರಿ ಅಂತ್ಯದೊಳಗಾಗಿ ಐಹೊಳೆ ಗ್ರಾಮದ 124 ಕುಟುಂಬಗಳಿಗೆ ನಿವೇಶನ ನೀಡಲು ಭೂಮಿ ಖರೀದಿ ಕಾರ್ಯ ನಡೆಯಲಿದೆ ಎಂದರು.
ಐಹೊಳೆ ಗ್ರಾಮ ಸಂಪೂರ್ಣ ಸ್ಥಳಾಂತರ ಕುರಿತ ಪ್ರಸ್ತಾವನೆ ಈಗಾಗಲೇ ಸರಕಾರದ ಬಳಿ ಇದ್ದು, ಈ ಬಗ್ಗೆ ಚರ್ಚಿಸಿ ಹೆಚ್ಚುವರಿ ಭೂಮಿ ಖರೀದಿಗೆ ಕಂದಾಯ ಇಲಾಖೆಯ ಜೊತೆಗೆ ಡಿಸೆಂಬರ 15 ರೊಳಗಾಗಿ ತೀರ್ಮಾಣ ಕೈಗೊಳ್ಳಲಾಗುವುದು. ಈಗಾಗಲೇ ಇಲ್ಲಿಯ ಐತಿಹಾಸಿಕ ತಾಣಗಳ ಅಭಿವೃದ್ದಿಗೆ ಚಾಲುಕ್ಯ ಪ್ರಾಧಿಕಾರ ಇದ್ದು, ಅದರ ಮೂಲಕ ಯಾವ ರೀತಿಯಲ್ಲಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರ ಜೊತೆ ಚರ್ಚಿಸಿ ತಿರ್ಮಾಣ ಕೈಗೊಳ್ಳಲಾಗುತ್ತಿದೆ. ಸ್ಮಾರಕಗಳಂತಹ ದೊಡ್ಡ ಸಂಪತ್ತು ಸಿಗುವುದು ಬಹಳ ವಿರಳ. ಅವುಗಳನ್ನು ಮುಂದಿನ ಜನಾಂಗಕ್ಕೆ ತೆಗೆದುಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸ್ಮಾರಕಗಳ ಸಂರಕ್ಷಣೆಗೆ ದತ್ತು ಯೋಜನೆ
ಕರ್ನಾಟಕದ ಕಲೆ, ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮದ ಮೂಲಕ ಬೀದರ ಜಿಲ್ಲೆಯಿಂದ ರಾಜ್ಯದ ಪ್ರವಾಸವನ್ನು ಪ್ರಾರಮಬಿಸಲಾಗಿದೆ. ರಾಜ್ಯಾದ್ಯಂತ 280 ಸಂರಕ್ಷಿತ ಸ್ಮಾರಕಗಳನ್ನು ದತ್ತು ಯೋಜನೆಗೆ ಒಳಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸ್ಮಾರಕಗಳನ್ನು ದತ್ತು ಯೋಜನೆಗೆ ನೀಡಲಾಗುತ್ತಿದೆ. ಐಹೊಳೆಯಲ್ಲಿರುವ ಕೆಲವೊಂದು ಸ್ಮಾರಕಗಳ ಸಂರಕ್ಷಣೆಗೆ ದತ್ತು ಪಡೆಯಲು ಆಸಕ್ತರು ಮುಂದೆ ಬಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕರಾದ ಎಚ್.ವಾಯ್.ಮೇಟಿ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಪ್ರಶಾಂತ ಮನೋಹರ, ಭಾರತೀಯ ಪುರಾತತ್ವ ಇಲಾಖೆಯ ದೇವರಾಜ, ಪ್ರಮೋದ, ಪ್ರಶಾಂತ ಕುಲಕರ್ಣಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಮಾಜಿ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಇದ್ದರು.
*ಸ್ಮಾರಕ ವೀಕ್ಷಣೆ ಮಾಡಿದ ಸಚಿವ ಪಾಟೀಲ*
ಐಹೊಳೆ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ದೇಸಾಯಿ ವಾಡೆಯ ಪಕ್ಕದಲ್ಲಿರುವ ಬಸವೇಶ್ವರ ದೇಸ್ಥಾನಕ್ಕೆ ತೆರಳಿ ದರ್ಶನ ಪಡೆದು ಸ್ಮಾರಕಗಳ ವೀಕ್ಷಣೆಗೆ ತೆರಳಿದರು. ಸ್ಮಾರಕಗಳಲ್ಲಿ ವಾಸವಾಗಿರುವ ಮನೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ವೀಕ್ಷಣೆ ಮಾಡಿದರು. ಸ್ಮಾರಕಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಬೇರೆಡೆ ಜಾಗ ನೀಡಿದಲ್ಲಿ ಸ್ಥಳಾಂತರಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಅಲ್ಲದೇ ಪ್ರವಾಸಿ ಮಾರ್ಗದರ್ಶಿ ಕೊಟ್ರೇಶ್ ಅವರು ಐಹೊಳೆ ಪ್ರವಾಸಿ ತಾಣಗಳಲ್ಲಿರುವ ದೇವಾಲಯ, ಸ್ಮಾರಕಗಳ ಮಾಹಿತಿಯನ್ನು ಸಚಿವರಿಗೆ ನೀಡಿದರು.