ಬಾಗಲಕೋಟೆ
ಪೌರಾಣಿಕ ನಾಟಕಗಳು ಸಾತ್ವಿಕತೆಯನ್ನು ತುಂಬಿ ಕೊಡುತ್ತವೆ ಎಂದು ಹುನಗುಂದದ ಹಿರಿಯ ನ್ಯಾಯವಾದಿ ವ್ಹಿ. ಆರ್. ಜನಾದ್ರಿ ಹೇಳಿದರು.
ಅವರು ರವಿವಾರ ಹುನಗುಂದದ ಹೊನ್ನಕುಸುಮ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ ಜರುಗಿದ *ತಿಂಗಳ ಬೆಳಕು 15* ರ ಕಾರ್ಯಕ್ರಮದಲ್ಲಿ ಅಮೀನಗಡದ ಹಿರಿಯ ಲೇಖಕರಾದ ಶ್ರೀ ಶಿವಶಂಕ್ರಪ್ಪ ಶಿರೋಳರವರ ನಾಟಕ ನಳದಮಯಂತಿ ಕೃತಿಯ ಕುರಿತಾಗಿನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪೌರಾಣಿಕ ಸಂಗತಿಗಳನ್ನು ಆಧಾರವಾಗಿಟ್ಟುಕೊಂಡ ಸಾಕಷ್ಟು ಕಾವ್ಯ, ನಾಟಕ ಅಧ್ಯಯನ ಇಂದಿನ ಯುವ ಪೀಳಿಗೆಗೆ ಅತ್ಯಂತ ಅವಶ್ಯಕವಾಗಿರುತ್ತದೆ ಏಕೆಂದರೆ ಪೌರಾಣಿಕ ಸಾಹಿತ್ಯವು ವರ್ತಮಾನದ ಬದುಕಿಗೆ ಬಿಂಬಪ್ರತಿಬಿಂಬವಾಗಿ ಮುಖಾಮುಖಿಯಾಗುತ್ತದೆ.
ಇಲ್ಲಿನ ಸನ್ನಿವೇಶ, ಪಾತ್ರಚಿತ್ರಣ, ವ್ಯಂಗ್ಯೋಕ್ತಿ ಹಾಗೂ ನೈತಿಕತೆಯ ತಳಹದಿಯ ಮೇಲಿನ ಸನ್ನಿವೇಶಗಳು ಇಂದಿನ ಬದುಕಿಗೆ ಸೂಕ್ತವಾಗಿ ಹಾಗೂ ಸರಳವಾಗಿ ಮಾರ್ಗದರ್ಶನ ಮಾಡುತ್ತವೆ ಹಾಗೂ ನಮ್ಮ ಜೀವನಕ್ಕೆ ಕನ್ನಡಿಯನ್ನು ಹಿಡಿಯುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೇದಿಕೆಯ ಅಧ್ಯಕ್ಷರಾದ ಸಂಗಣ್ಣ ಮುಡಪಲದಿನ್ನಿಯವರು ಮಾತನಾಡಿ ಪೌರಾಣಿಕ ಕಥೆಗಳಲ್ಲಿ ಆಧುನಿಕತೆಯನ್ನು ಸಮ್ಮಿಳಿಸಿ ನಳದಮಯಂತಿ ನಾಟಕವನ್ನು ಅತ್ಯಂತ ಮಾರ್ಮಿಕವಾಗಿ ರಕ್ಷಿಸಿದ್ದಾರೆ ಎಂದರಲ್ಲದೆ ಮುಂದುವರೆದು ಕಥೆ ಪೌರಾಣಿಕ ನಾಟಕದ ಪಾತ್ರಧಾರಿಗಳು ಜ್ವಲಂತ ವಿಚಾರಗಳ ಗಳನ್ನು ಕುರಿತು ಚರ್ಚಿಸಿದ್ದಾರೆ ಎಂದರು.
ಕೃತಿಕಾರರಾದ ಅಮೀನಗಡದ ಹಿರಿಯ ಲೇಖಕ ಶಿವಶಂಕರಪ್ಪ ಶಿರೋಳ್ ಮಾತನಾಡಿ ನಳದಮಯಂತಿ ಎಂಬ ನಾಟಕಕ್ಕೆ ಮೂಲ ವ್ಯಾಸ ಮಹರ್ಷಿಗಳಿಂದ ಹಿಡಿದು ಕನಕದಾಸರ ನಳ ಚರಿತ್ರೆ ಹಾಗೂ ಇತ್ತೀಚಿನ ಸಾಹಿತಿಗಳ ವಿಚಾರಗಳನ್ನು ಅಧ್ಯಯನ ಮಾಡಿಕೊಂಡು ಮೌಲಿಕ ರೂಪವನ್ನು ಕೊಟ್ಟು ಸಾಹಿತ್ಯ ಪ್ರಿಯರಿಗೆ ಪರಿಚಯಿಸಲು ಪ್ರಯತ್ನಿಸಿದ್ದೇನೆ ಎಂದರು.
ಅಮೀನಗಡದ ವೀರಪ್ಪ ಹೊಕ್ರಾಣಿ ಮಾತನಾಡಿದರು. ಮುತ್ತಯ್ಯ ಲೂತಿಮಠ ಪ್ರಾರ್ಥಿಸಿದರು ಅಭಿಷೇಕ್ ಮುಡಪಲದಿನ್ನಿ ಭಾವಗೀತೆ ಹಾಡಿದರು. ಎಂಡಿ ಚಿತ್ತರಿಗಿ ಸ್ವಾಗತಿಸಿ ನಿರೂಪಿಸಿದರು ಜಗದೀಶ ಹಾದಿಮನಿ ವಂದಿಸಿದರು ಕಾರ್ಯಕ್ರಮದಲ್ಲಿ ಹಿರಿಯ ಕಿರಿಯ ಲೇಖಕರು ಭಾಗವಹಿಸಿದ್ದರು.