ಬಾಗಲಕೋಟೆ:
ಗರ್ಭೀಣಿ ಮತ್ತು ಭಾಣಂತಿಯರಲ್ಲಿ ಮರಣ ಪ್ರಮಾಣ ಕಡಿಮೆ ಮಾಡಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ತಾಯಿ ಮರಣ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತಮಾಡಿದ ಅವರು ಪ್ರಸಕ್ತ ವರ್ಷ 8 ಜನ ಬಾಣಂತಿಯರು ಮರಣಹೊಂದಿದ್ದಾರೆ. ಅದು 30 ವರ್ಷದೊಳಗಿನ ಗರ್ಭಿಣಿಯರು 8 ಜನ ಮರಣ ಹೊಂದಿದ್ದಾರೆ. ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಎಲ್ಲ ರೀತಿಯ ಸೌಲಭ್ಯಗಳು ಇವೆ. ಆದರೂ ಮರಣಗಳು ಸಂಭವಿಸುತ್ತವೆ ಎಂದರೆ ಹೇಗೆ ಎಂಬ ಪ್ರಶ್ನೆ ಹಾಕಿದರು. ಇದಕ್ಕೆ ವೈದ್ಯರ ಹಾಗೂ ಆಶಾ ಕಾರ್ಯಕರ್ತ, ಕ್ಷೇತ್ರ ಮಟ್ಟದ ಆರೋಗ್ಯ ನಿರೀಕ್ಷಕರು ಕಾರಣವೆಂದರು.
ಆರೋಗ್ಯ ಇಲಾಖೆ ವರದಿ ಪ್ರಕಾರ ಹೆರಿಗೆಯಾದ 15 ದಿನಗಳ ಒಳಗೆ ಭಾಣಂತಿಯರು ಮರಣಹೊಂದಿದ್ದಾರೆ. ಹೆರಿಗೆ ಆದ ನಂತರ ಮನೆಗೆ ಹೋದಾಗ 15 ದಿನಗಳ ವರೆಗೆ ಆಶಾ ಕಾರ್ಯಕರ್ತೆಯರು ಆಗಾಗ್ಗೆ ಭೇಟಿ ನೀಟಿ ಆರೋಗ್ಯ ವಿಚಾರಿಸಬೇಕು. ಒಂದು ಕೂಡಾ ಮರಣ ಆಗಬಾರದು ಎಂಬುದು ಸರಕಾರದ ಉದ್ದೇಶವಾಗಿದೆ. ಇದಕ್ಕಾಗಿ ಸರಕಾರ ಎಲ್ಲ ರೀತಿಯ ಸೌಲಭ್ಯ ಹಾಗೂ ಖರ್ಚು ಮಾಡುತ್ತಿದೆ. ಅವರ ಬಗ್ಗೆ ನಿರಂತರ ಗಮನಹರಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯಲ್ಲಿ ಸ್ಕ್ಯಾನಿಂಗ್ ಸೆಂಟರಗಳು 182 ಇವೆ. ಅವುಗಳು ಆರೋಗ್ಯ ಇಲಾಖೆ ನಿಯಮಾನುಸಾರ ನಡೆಯುತ್ತಿರುವ ಬಗ್ಗೆ ಗಮನಸದೇ ಇರುವುದು ಕಂಡುಬಂದಿದೆ. ಆರೋಗ್ಯ ಇಲಾಖೆಯ ನಿಷ್ಕಾಳಜಿ, ಕಾರ್ಯವೈಖರಿಯಿಂದ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು 15 ದಿನಗಳ ಒಳಗಾಗಿ ಜಿಲ್ಲೆಯ ಎಲ್ಲ 182 ಸ್ಕ್ಯಾನಿಂಗ್ ಸೆಂಟರಗಳಿಗೆ ಭೇಟಿ ನೀಡಿ ಕಾನೂನು ಬಾಹೀರವಾಗಿ ನಡೆಯುತ್ತಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯತ ಸಿಇಓ ಶಶೀಧರ ಕುರೇರ ಮಾತನಾಡಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಆದಾಗ್ಯೂ ಕೂಡಾ ಆರೋಗ್ಯ ಇಲಾಖೆ ಕ್ರಮಕೈಗೊಳ್ಳದೇ ಇರುವುದು ವಿಷಾಧನೀಯ ಸಂಗತಿ. ಆದ್ದರಿಂದ ಮಾಹಿತಿ ತಿಳಿದ ತಕ್ಷಣ ದಾಳಿ ನಕಲಿ ವೈದ್ಯರೆಂದು ಕಂಡುಬಂದಲ್ಲಿ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಅಂದಾಗ ಮಾತ್ರ ಇದನ್ನು ಕಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಯರಗಲ್ಲ, ಕುಟುಂಬ ಕಲ್ಯಾಣಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ ಸೇರಿದಂತೆ ಎಲ್ಲ ತಾಲೂಕಾ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.