This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Education NewsLocal NewsState News

ಮಾನವ ಹಕ್ಕುಗಳ ರಕ್ಷಣೆಗೆ ಆಯೋಗ ಬದ್ದ : ಒಂಟಗೋಡಿ

ಮಾನವ ಹಕ್ಕುಗಳ ರಕ್ಷಣೆಗೆ ಆಯೋಗ ಬದ್ದ : ಒಂಟಗೋಡಿ

ಬಾಗಲಕೋಟೆ

ಮಾನವ ಹಕ್ಕುಗಳನ್ನು ಸಂರಕ್ಷಿಸುವದರ ಜೊತೆಗೆ ಅವುಗಳು ಉಲ್ಲಂಘನೆಯಾಗದಂತೆ ತಡೆಯಲು ಆಯೋಗ ಬದ್ದವಾಗಿರುವುದಾಗಿ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯ ಎಸ್.ಕೆ.ಒಂಟಗೋಡಿ ಹೇಳಿದರು.

ನಗರದ ನೂತನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಂವಿಧಾನದಡಿ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಅವೆಲ್ಲವುಗಳು ಮಾನವ ಹಕ್ಕುಗಳ ತಳಹದಿಯ ಮೇಲೆ ಗುರುತಿಸಲ್ಪಟ್ಟಿವೆ. ಇಂತಹ ಹಕ್ಕುಗಳ ಮೇಲೆ ಉಲ್ಲಂಘನೆಯಾದಲ್ಲಿ ನೊಂದವರು, ಅವರ ಪರವಾಗಿ ಸಹ ಆಯೋಗಕ್ಕೆ ದೂರು ದಾಕಲಿಸಬಹುದಾಗಿದೆ. ಉಲ್ಲಂಘನೆಗೆ ಸಂಬಂದಿಸಿದ ಪತ್ರಿಕೆಯ ವರದಿ ಆಧಾರದ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ ಎಂದರು.

ಬಂದಿಖಾನೆ, ಪೊಲೀಸ್ ಠಾಣೆ ಹಾಗೂ ಕಟ್ಟಡ ಕಾಮಗಾರಿಗಳ ಸ್ಥಳಗಳಲ್ಲಿ ಮಾನವ ಹಕ್ಕುಗಳಿಗೆ ಉಲ್ಲಂಘನೆಯಾಗುವ ಸಂಭವ ಇರುತ್ತದೆ. ಅಂತಹ ಪ್ರಸಂಗ ಕಂಡುಬಂದಲ್ಲಿ ಯಾರಾದರು ದೂರು ನೀಡಿದಲ್ಲಿ ತಕ್ಷಣವೇ ಕ್ರಮಕೈಗೊಳ್ಳಲು ಸರಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತಿದೆ. ವಸತಿ ನಿಲಯಗಳಲ್ಲಿ ಮಕ್ಕಳಿಗೆ ಸರಿಯಾದ ಮೂಲಭೂತ ಸೌಲಭ್ಯಗಳು ನೀಡಿದ ಬಗ್ಗೆ ಪರಿಶೀಲಿಸಿ, ಮಕ್ಕಳ ಹಕ್ಕುಗಳ ಬಗ್ಗೆ ತೀವ್ರ ನಿಗಾವಹಿಸಿ ಉಲ್ಲಂಘನೆ ಕಂಡುಬಂದಲ್ಲಿ ಕ್ರಮವಹಿಸಲಾಗುತ್ತಿದೆ ಎಂದರು.

ಆಯೋಗದಲ್ಲಿ ಚಾಲ್ತಿಯಲ್ಲಿರುವ ಪ್ರಕರಣಗಳನ್ನು ವಿಲೇ ಮಾಡಲಾಗುತ್ತಿದೆ. ಅಲ್ಲದೇ ಆಯೋಗದ ಅಧ್ಯಕ್ಷರ ಸಲಹೆ ಮೇರೆಗೆ ಪ್ರತಿ ತಿಂಗಳು 2 ಅಥವಾ 3 ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿ ಬಾಕಿ ಉಳಿದ ಪ್ರಕರಣಗಳನ್ನು ಅಲ್ಲಿಯೇ ವಿಲೇವಾರಿ ಮಾಡಲಾಗುತ್ತಿದೆ. ಹೊಸ ಪ್ರಕರಣಗಳ ಕಂಡುಬಂದಲ್ಲಿ ದಾಖಲಿಸಿಕೊಂಡು ವಿಲೇಗೆ ಕ್ರಮವಹಿಸಲಾಗುತ್ತಿದೆ. ಜನ ಸಾಮಾನ್ಯರಿಗೆ ಮಾನವ ಹಕ್ಕುಗಳೆಂದರೆನು, ಹಕ್ಕುಗಳ ಉಲ್ಲಂಘನೆ ಯಾವ ರೀತಿ ಆಗುತ್ತದೆ ಎಂಬುದನ್ನು ಅರಿವು ಮೂಡಿಸಿ ಉಲ್ಲಂಘನೆಯಾದ ಸಂದರ್ಭದಲ್ಲಿ ದೂರು ಸ್ವೀಕರಿಸಿ ಕ್ರಮಕೈಗೊಂಡು ಹಕ್ಕುಗಳ ಸಂರಕ್ಷಣೆ ಮಾಡಲಾಗುತ್ತಿದೆ ಎಂದರು.
ಫೆಬ್ರವರಿಯಿಂದ ಇಲ್ಲಿಯವರೆಗೆ ಆಯೋಗದ ಅಧ್ಯಕ್ಷರು, ಸದಸ್ಯರ ನೇಮಕಾತಿ ವಿಳಂಬದಿಂದ ಆಯೋಗದ ಮುಂದೆ 5600 ಪ್ರಕರಣಗಳ ಬಾಕಿ ಉಳಿದಿವೆ. ಈಗ ನೇಮಗೊಂಡಿದ್ದು, ತೀವ್ರವಾಗಿ ಪ್ರಕರಣಗಳನ್ನು ಕೆಲವೇ ವಿಲೇಗೆ ಕ್ರಮವಹಿಸಲಾಗುತ್ತಿದೆ. ಜಿಲ್ಲೆಗೆ ಸಂಬಂಧಿಸಿದಂತೆ 66 ಪ್ರಕರಣ ಬಾಕಿ ಇದ್ದು, ಹೊಸ ಪ್ರಕರಣ ಜೊತೆಗೆ ಚಾಲ್ತಿ ಪ್ರಕರಣಗಳನ್ನು ಬೇಗನೆ ವಿಲೇವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ ಅಮರೇಶ ಪಮ್ಮಾರ ಇದ್ದರು.

ಬೆಳಗಾವಿ ಜಿಲ್ಲೆಯ ಒಂಟಮೋರಿಯಲ್ಲಿ ಒಬ್ಬ ಹೆಣ್ಣು ಮಗಳನ್ನು ಸಾರ್ವಜನಿಕವಾಗಿ ಹಿಂಸೆ ಕೊಟ್ಟಿರುವ ಘಟನೆ ಮಾನ ಸಮಾಜ ತಲೆ ತಗ್ಗಿಸುವಂತಾಗಿದೆ. ಈ ಘಟನೆ ಬಗ್ಗೆ ಉಚ್ಛ ನ್ಯಾಯಾಲಯ, ರಾಷ್ಟ್ರ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷರು ಸಹ ಗಮನ ಹರಿಸಿ, ಪ್ರಕರಣ ಸ್ವತಃ ದಾಖಲಿಸಿಕೊಂಡಿದ್ದು, ಅವೇಲ್ಲ ಪ್ರಕರಣಗಳು ವಿಚಾರಣೆ ಹಂತದಲ್ಲಿದೆ. ಈ ಬಗ್ಗೆ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲು ಸರಕಾರಕ್ಕೆ ಶಿಫಾರಸ್ಸು ಸಹ ಮಾಡಲಾಗಿದೆ.
– *ಎಸ್.ಕೆ.ಒಂಟಗೋಡಿ, ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ*

*ವಿವಿದೆಡೆ ಭೇಟಿ ಪರಿಶೀಲನೆ*

ಜಿಲ್ಲೆಗೆ ಆಗಮಿಸಿದ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್.ಕೆ.ಒಂಟಗೋಡಿ ನಗರದ ಜಿಲ್ಲಾ ಕಾರಾಗೃಹ, ವಿವಿಧ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಹಾಗೂ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಕಾರಾಗೃಹದಲ್ಲಿಯ ಕೈದಿಗಳ ಜೊತೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಕಾರಾಗೃಹದಲ್ಲಿ ಸ್ವಚ್ಛತೆ ಕಾಪಾಡಲು ಸೂಚಿಸಿದರು. ನವನಗರದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳಿಗೆ ಭೇಟಿ ನೀಡಿದರು. ವಸತಿ ನಿಲಯಗಳಲ್ಲಿ ಆಹಾರ ದಾನ್ಯಗಳ ಪರಿಶೀಲಿಸಿದರು. ವಿದ್ಯಾರ್ಥಿಗಳ ಜೊತೆಗೆ ಮಾತನಾಡಿ ಸ್ವಚ್ಛತೆ, ಊಟದ ವ್ಯವಸ್ಥೆ ಸರಿಯಾಗಿ ಇರುವ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದುಕೊಂಡರು. ಅಲ್ಲದೇ ಹೆಚ್ಚುವರಿ ಕೊಠಡಿಗಳ ಅವಶ್ಯಕತೆ ಇರುವ ಬಗ್ಗೆ ಅಧಿಕಾರಿಗಳು ಆಯೋಗದ ಅಧ್ಯಕ್ಷರ ಗಮನಕ್ಕೆ ತಂದರು. ನಂತರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಅವರು ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚು ಗಮನಹರಿಸಲು ತಿಳಿಸಿದರು. ಆಸ್ಪತ್ರೆ ಕಟ್ಟಡ ಶಿಥೀಲಗೊಂಡಿದ್ದು, ಸರಿಪಡಿಸಲು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರಗೆ ತಿಳಿಸಿದರು.

Nimma Suddi
";