ಅಮೀನಗಡ
ಗ್ರಾಮೀಣ ಜನರಲ್ಲಿ ಆರೋಗ್ಯ ಜಾಗೃತಿಗಾಗಿ ಉಚಿತ ಶಿಬಿರ ಆಯೋಜಿಸಲಾಗಿದ್ದು, ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ ತೋರದೆ ತಜ್ಞವೈದ್ಯರನ್ನು ಭೇಟಿ ಆಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸೂಳೇಬಾವಿ ಜಡಿಸಿದ್ದೇಶ್ವರ ಟ್ರಸ್ಟ್ ಅಧ್ಯಕ್ಷ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಹೇಳಿದರು.
ಸಮೀಪದ ಸೂಳೇಬಾವಿಯ ಮಹಾಂತೇಶ ಮಠದಲ್ಲಿ ಜಡಿಸಿದ್ದೇಶ್ವರ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು. ಹಿಂದಿನ ಕಾಲದಲ್ಲಿ ವಾಂತಿ, ಬೇ, ಕ್ಷಯ, ಕಾಲರಾದಂತ ರೋಗ ಸಾಮಾನ್ಯವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತರ ಕಾಯಿಲೆ ಎಂದು ಬಡವರು ಆರ್ಥಿಕ ನಷ್ಟದ ಹೆದರಿಕೆಯಿಂದ ತಪಾಸಣೆಗೆ ಒಳಗಾಗುವುದಿಲ್ಲ. ಹೀಗಾಗಿ ಅವರನ್ನು ನಷ್ಟ, ಸಂಕಷ್ಟದಿAದ ಪಾರಾಗಲು ಇಂತಹ ಆರೋಗ್ಯ ಶಿಬಿರಗಳು ಸಹಕಾರಿಯಾಗಲಿವೆ ಎಂದರು.
ಶಿಬಿರದಲ್ಲಿ ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ತಜ್ಞವೈದ್ಯರಾದ ಡಾ.ರಶ್ಮಿ, ಡಾ.ಸುಧಾಕರ, ಡಾ.ಸಂಗಮೇಶ, ಡಾ.ಸಾಗರ, ಡಾ.ರೇಷ್ಮಾ, ಶೂಶ್ರೂಷಾಕಾರಿ ಉಮೇಶ ಬೀಳಗಿ ನೇತೃತ್ವದ ತಂಡ ತಪಾಸಣೆ ನಡೆಸಿತು.
ಜಡಿ ಸಿದ್ದೇಶ್ವರ ಸ್ವಾಮೀಜಿ, ಟ್ರಸ್ಟ್ ಕಾರ್ಯದರ್ಶಿ ನಾಗೇಂದ್ರ ನಿರಂಜನ, ಗ್ರಾಪಂ ಅಧ್ಯಕ್ಷ ಪಿಡ್ಡಪ್ಪ ಕುರಿ, ಗೋವಿಂದಗೌಡ ಪಾಟೀಲ, ದಾದಾಪೀರ ತಂಗಡಗಿ, ಚನ್ನಪ್ಪ ಭದ್ರಣ್ಣವರ ಇತರರು ಇದ್ದರು.