ಬಾಗಲಕೋಟೆ
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಒಂದು ತಿಂಗಳಲ್ಲಿ ಸರಕಾರಿ ನಿವೇಶನ ಗುರುತಿಸಿ ಹೊಸ ಕಟ್ಟಡ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಪಂ ಸಿಇಒ ಶಶಿಧರ ಕುರೇರ್ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಾನಾ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಗನವಾಡಿ ಸೇವೆಗಳನ್ನು ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪಿಸಲು ಮತ್ತು ಅಪೌಷ್ಟಿಕತೆ, ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಬದ್ಧತೆಯಿಂದ ಕೆಲಸ ಮಾಡಬೇಕು. ಕರ್ತವ್ಯ ಲೋಪ ಕಂಡುಬAದಲ್ಲಿ ಅಂತವರÀ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಗೆ ನೀಡಿದರು.
ಅಪೌಷ್ಟಿಕತೆ ಮತ್ತು ಬಾಲ್ಯವಿವಾಹ ನಿರ್ಮೂಲನೆಗೆ ಅಕಾರಿಗಳು ಶ್ರಮಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಬೇಕು. ಮಕ್ಕಳಿಗೆ ನಿಗದಿತ ಮೆನುವಿನಂತೆ ಆಹಾರ, ಆರೋಗ್ಯ ತಪಾಸಣೆ ಮಾಡಿಸಬೇಕು. ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳನ್ನು ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಪೋಷಕರ ಮನವೊಲಿಸುವ ಕೆಲಸವಾಗಬೇಕು ಎಂದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಜನರಲ್ಲಿ ಅರಿವು ಮೂಡಿಸಬೇಕು. ಮತ್ತು ಬಾಲ್ಯವಿವಾಹ ತಡೆಗಟ್ಟಲು ಇತರೆ ಇಲಾಖೆಗಳ ಸಹಯೋಗದೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು.
ಸಿಡಿಪಿಒ, ಮೇಲ್ವಿಚಾರಕಿಯರು ಅಂಗನವಾಡಿ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು. ಭೇಟಿಯ ಸಂದರ್ಭದಲ್ಲಿ ಕೇಂದ್ರದ ಸ್ವಚ್ಛತೆ, ದಾಖಲಾತಿ ನಿರ್ವಹಣೆ, ಮಕ್ಕಳ ಹಾಜರಾತಿ, ಮಕ್ಕಳ ಸುರಕ್ಷತೆ, ಆಹಾರ ವಿತರಣೆಯ ಬಗ್ಗೆ ಸಮಗ್ರ ಪರಿಶೀಲನೆ ಮಾಡಿ ಕರ್ತವ್ಯ ನಿರ್ಲಕ್ಷö್ಯತೆ ಕಂಡುಬಂದಲ್ಲಿ ಅಂತಹ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಅಮರೇಶ ಹಾವಿನ ಸೇರಿದಂತೆ ಜಿಲ್ಲೆಯ ಸಿಡಿಪಿಒ, ಹಿರಿಯ ಮೇಲ್ವಿಚಾರಕಿಯರು ಇದ್ದರು.