ಬಾಗಲಕೋಟೆ:
ನವನಗರದ ಕಲಾಭವನದ ಆವರಣದಲ್ಲಿ ಏರ್ಪಡಿಸಿದ ಸಿರಿಧಾನ್ಯ ಹಾಗೂ ಸಾವಯವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ ಮೇಳಕ್ಕೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಚಾಲನೆ ನೀಡಿದರು.
ನಂತರ ಸಚಿವರು ಸೇರಿದಂತೆ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಎಚ್.ವಾಯ್.ಮೇಟಿ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಸೇರಿದಂತೆ ಇತರರು ಗೋಮಾತೆಗೆ ಪೂಜೆ ಸಲ್ಲಿಸಿ, ಗಣೇಶ ದರ್ಶನ ಪಡೆದು ಮಳಿಗೆಗಳನ್ನು ಉದ್ಘಾಟಿಸಿ ವೀಕ್ಷಣೆ ಮಾಡಿದರು.
ಮೇಳದಲ್ಲಿ ಪಶು ಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ, ತೋಟಗಾರಿಕೆ, ರೇಷ್ಮೆ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಸಾವಯವ ಕೃಷಿಕರ ಸಂಘ, ಧರ್ಮಸ್ಥಳ ಸಿರಿ ಮಿಲೆಟ್, ಕಾವೇರಿ ಸ್ತ್ರೀಶಕ್ತಿ ಸಂಘ, ಮುಧೋಳದ ಎಣ್ಣೆಕಾಳು ಸಿರಿಧ್ಯಾನ, ಜಮಖಂಡಿ ಆಯಿಲ್ ಸೀಡ್ಸ್ ಮಿಲ್, ಧಾನಮ್ಮದೇವಿ ಸ್ತ್ರೀಶಕ್ತ ಸಂಘ, ನುಟ್ರಿಪ್ಲಸ್ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ಮಾರಾಟಕ ಮಳಿಗಳಿಗೆ ಹಾಕಲಾಗಿತ್ತು.
ಮೇಳದಲ್ಲಿ ಆಗಮಿಸಿದ ಜನರು ಬಳೂಲ ಹಣ್ಣಿನಿಂದ ಮಾಡಿದ ರಸವನ್ನು ಸವಿದರು. ಸಚಿವರಾದ ಆರ್.ಬಿ.ತಿಮ್ಮಾಪೂರ ಸೇರಿದಂತೆ ಇತರೆ ಜನಪ್ರತಿನಿಧಿಗಳು ಸಹ ಬಳೂಲ ಹಣ್ಣಿನ ರಸವನ್ನು ಸವಿದರು. ಪ್ರದರ್ಶನದಲ್ಲಿ ಬಾರಕೋಲು, ಎತ್ತಿನ ಗೆಜ್ಜೆಸರ, ಹಣೆಕಟ್ಟು, ಬ್ಯಾಕಟಗಿ, ಕೈಮಡಕಿ, ತತ್ರಾಣಗಿ, ಹಾರಿ, ಗುದ್ಲಿ, ಎತ್ತಿನ ಚಕ್ಕಡಿ, ಕೂರಿಗೆ, ನೇಗಿಲ, ನೂಲಿನ ಹಗ್ಗ, ಬೆಡಗ, ಅಕ್ಕಡಿಕಾಳು ಕೋಲು, ಗ್ವಾರಿ ಸೇರಿದಂತೆ ಅನೇಕ ಕೃಷಿ ಕಾರ್ಯಗಳ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಸಾವಯವ ಸಿರಿಧಾನ್ಯಗಳಾದ ಬರಗು, ಸಾವೆ, ಕೂರಲು, ನವಣಿ, ಸಜ್ಜಿ, ಮಡಕಿ ಸೇರಿದಂತ 9 ಧಾನ್ಯಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಯಿತು. ಸಾಯವಯ ಕೃಷಿಯಿಂದ ತಯಾರಿಸಿದಿ ಬೆಲ್ಲ, ಬೆಲ್ಲದ ಪುಡಿ, ಪಾಕಗಳು ನೆರೆದ ಜನ ಖರೀದಿ ಮಾಡಲು ಮುಂದಾದರು. ಅಲ್ಲದೇ ಭಾರತೀಯ ಸೈನ್ಯದಲ್ಲಿ ಇತ್ತೀಚೆಗೆ ಸ್ಥಾನಮಾನ ಗುರುತಿಸಿಕೊಂಡ ಮುಧೋಳ ಬೇಟೆನಾಯಿ (ಹೌಂಡ್ಸ್) ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸಿರಿಧಾನ್ಯಗಳಿಂದ ರಚಿಸಿದ ಅಂಬಾರಿಯ ರಂಗೋಲಿ ಎಲ್ಲರನ್ನು ಆಕರ್ಷಿಸಿತು.