ಬಾಗಲಕೋಟೆ
ಬರ ಪರಿಸ್ಥಿತಿ ಹಾಗೂ ಬೇಸಿಗೆ ಸಮರ್ಪಿಸುತ್ತಿರುವ ಹಿನ್ನಲೆಯಲ್ಲಿ ತಾಲೂಕಿನ ಗ್ರಾಮಗಳಲ್ಲಿಯ ಜನ, ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಯಾಗಬಾರದೆಂಬ ಮುಂಜಾಗ್ರತಾ ಕ್ರಮವಾಗಿ ಮಣ್ಣೆಕಟ್ಟಿ, ಭಗವತಿ, ಹಳ್ಳೂರ ಹಾಗೂ ಬೇವೂರ ಗ್ರಾಮ ಪಂಚಾಯತಿಗಳಿಗೆ ತಾಲೂಕಾ ನೋಡಲ್ ಅಧಿಕಾರಿ ಎಸ್.ಎಂ.ಕೋರೆ ಹಾಗೂ ಬಾಗಲಕೋಟ್ ತಹಶೀಲ್ದಾರ್ ಅಮರೇಶ್ ಪಮ್ಮಾರ್ ಗುರುವಾರ ಭೇಟಿ ನೀಡಿದರು.
ಹಳ್ಳೂರು ಗ್ರಾಮ ಪಂಚಾಯಿತಿಗೆ ಆಗಮಿಸಿದ ನೋಡಲ್ ಅಧಿಕಾರಿ ಹಾಗೂ ತಹಶೀಲ್ದಾರ್ ಬಹಿರ್ಮಟ್ಟಿ ಹಳ್ಳೂರ್ ಎರಡು ಗ್ರಾಮಗಳನ್ನು ಒಳಗೊಂಡ ಹಳ್ಳೂರು ಪಂಚಾಯಿತಿ ಬರುತ್ತಿದ್ದು, ಕುಡಿಯುವ ನೀರಿಗಾಗಿ ಹಳ್ಳೂರಲ್ಲಿ ಮೂರು ಹಾಗೂ ಬಹಿರ್ಮಟ್ಟಿಯಲ್ಲಿ ಮೂರು ಕೊಳವೆಬಾವಿಗಳಿದ್ದು, ಬರುವ ಮಾರ್ಚವರೆಗೆ ಕುಡಿಯುವ ನೀರಿನ ಸಮಸ್ಯೆ ಯಾಗಲಾರದು ಎಂಬುದನ್ನು ಸಿಬ್ಬಂದಿಯಿಂದ ತಿಳಿದುಕೊಂಡರು.
ಹಳ್ಳೂರು ಗ್ರಾಮಕ್ಕೆ ಕೆಂಪು ಕೆರೆಯಿಂದ 1996-97 ನೇ ಸಾಲಿನಲ್ಲಿ ಆದ ಮಲ್ಟಿ ವಿಲೇಜ್ ಸ್ಕೀಮ್ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಪೈಪ್ ಲೈನ್ ಆಗಿದ್ದರಿಂದ ಅಲ್ಲಲ್ಲಿ ಸ್ವಲ್ಪ ಪೈಪ್‍ಗಳ ರಿಪೇರಿ ಹೊರತುಪಡಿಸಿದರೆ ನೀರಿನ ಸಮಸ್ಯೆ ಆಗಲಾರದು.
ಒಂದು ವೇಳೆ ನೀರಿನ ಸಮಸ್ಯೆಯಾದಲ್ಲಿ ಹಳ್ಳೂರಲ್ಲಿ ಇಬ್ಬರು ರೈತರ ಖಾಸಗಿ ಬೋರ್ವೆಲ್‍ಗಳಿಂದ ಹಾಗೂ ಬಹಿರಮಟ್ಟಿಯಿಂದ ಇಬ್ಬರು ರೈತರ ಬೋರ್ವೆಲ್‍ಗಳಿಂದ ನೀರು ಪಡೆಯುವ ಕರಾರು ಮಾಡಲಾಗಿದ್ದು, ನೀರಿನ ಸಮಸ್ಯೆ ಆಗದಂತೆ ಗ್ರಾಮ ಪಂಚಾಯಿತಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ತಿಳಿದುಕೊಂಡರು.
ಈ ಸಂದರ್ಭದಲ್ಲಿ ಸಹಾಯಕ ಇಂಜಿನಿಯರ್ ಶಾಸ್ತ್ರಿ ಹಾಗೂ ಗ್ರಾಪಂ ಕಾರ್ಯದರ್ಶಿ ಬಿ.ಬಿದೇಸಾಯಿ ಉಪಸ್ಥಿತರಿದ್ದರು.