ಬಾಗಲಕೋಟೆ
ಮಳೆರಾಯನ ಕೃಪೆಯಿಂದ ಹರುಷಗೊಂಡ ರೈತರಿಗೀಗ ಹಸಿರು ಸೀರೆಯನ್ನುಟ್ಟು ಭೂತಾಯಿಗೆ ನಮ್ರವಾಗಿ ಚರಗದ ನೈವೇದ್ಯ ಅರ್ಪಿಸುವ ಎಳ್ಳ ಅಮವಾಸ್ಯೆ. ಈ ಭಾಗದ ರೈತರ ಸಡಗರದ ಹಬ್ಬವೆಂದೇ ಹೇಳಬೇಕು. ಭೂಮಿ ತಾಯಿಯ ಮಡಿಲೀಗ ಹಸಿರೇ ಹಸಿರು. ಚರಗ ಚೆಲ್ಲುವ ಹಬ್ಬ. ರೈತ ಭೂಮಿ ತಾಯಿಗೆ ಕೃತಜ್ಞತಾ ಸಮರ್ಪಣೆಯ ವಿಶಿಷ್ಠ ಹಬ್ಬ.
ಜಿಲ್ಲೆಯಲ್ಲಿ ಎಳ್ಳ ಅಮವಾಸ್ಯೆ ಹಿನ್ನೆಲೆ ರೈತರು ಭೂಮಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚರಗ ಹೊಡೆದು ಸಂಭ್ರಮಿಸಿದರು.
ವಿಶೇಷವಾಗಿ ರೈತರಿಗೆ ಇದು ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಕುಟುಂಬ ಸಮೇತ ಜಮೀನುಗಳಿಗೆ ತೆರಳಿ ಪೂಜೆ ಮಾಡುವ ಮೂಲಕ ಚರಗ ಹೊಲದಲ್ಲಿ ಚೆಲ್ಲಿ ಸಂಭ್ರಮಿಸಿದರು.ಹೀಗಾಗಿ ಜಿಲ್ಲೆಯ ರೈತಾಪಿ ವರ್ಗದವರು ಸಂಭ್ರಮದಿಂದ ಆಚರಣೆ ಮಾಡಿದರು.
ಜಿಲ್ಲೆಯ ಬಾಗಲಕೋಟೆ, ಹುನಗುಂದ, ಬದಾಮಿ, ಬೀಳಗಿ, ಮುಧೋಳ, ಜಮಖಂಡಿ, ಇಳಕಲ್ ತಾಲೂಕಿನ ಹಲವು ಹಳ್ಳಿಗಳಲ್ಲಿ ರೈತರು ಜಮೀನುಗಳಿಗೆ ತೆರಳಿ ಚರಗ ಹೊಡೆದು ಸಂಭ್ರಮಿಸಿದರು.
ಗ್ರಾಮೀಣ ಪ್ರದೇಶದಲ್ಲಿ ರೈತರು ಬೆಳಗ್ಗೆಯಿಂದಲೇ ತಮ್ಮ ಜಮೀನುಗಳಿಗೆ ಬಂಡಿ, ಅಟೋ, ಟಂಟಂ ಸೇರಿದಂತೆ ಇತರೆ ವಾಹನಗಳಲ್ಲಿ ತೆರಳುತ್ತಿರುವುದು ಕಂಡು ಬಂದಿತು. ಅದರಲ್ಲೂ ಕೆಲವರು ಬುತ್ತಿ ಕಟ್ಟಿಕೊಂಡು ತಲೆ ಮೇಲೆ ಹೊತ್ತು ತೆರಳಿದರು. ಸಮೀಪದಲ್ಲಿ ಜಮೀನು ಇದ್ದವರು ನಡೆದುಕೊಂಡು ಹೋದರು.
ಕುಟುಂಬ ಪರಿವಾರದೊಂದಿಗೆ ಮತ್ತು ಕೆಲವರು ತಮ್ಮ ಆಪ್ತ ಸ್ನೇಹಿತರನ್ನು ಕರೆಯಿಸಿಕೊಂಡಿದ್ದರು. ಎಲ್ಲರೂ ಸೇರಿ ಎತ್ತಿನ ಗಾಡಿಯಲ್ಲಿ ತೆರಳುತ್ತಿರುವುದು ಕಂಡು ಬಂದಿತು. ಹೊಲಕ್ಕೆ ತೆರಳಿ ಮದ್ಯದಲ್ಲಿರುವ ಬನ್ನಿಗಿಡ ಅಥವಾ ಮದ್ಯ ಭಾಗದಲ್ಲಿ ೫ ಕಲ್ಲುಗಳನ್ನಿಟ್ಟು ಅವುಗಳನ್ನೇ ದೇವರು ಎಂದು ಪೂಜಿಸಿ ಕಾಯಿ ಒಡೆದು ತಾವು ತಂದ ನಾನಾ ಬಗೆಯ ಅಡುಗೆಯನ್ನು ಭೂತಾಯಿಗೆ ನೈವೇದ್ಯವಾಗಿ ಸಲ್ಲಿಸಿದರು.
ನಂತರ ಅಡುಗೆಯನ್ನೆಲ್ಲ ಮಿಶ್ರಣ ಮಾಡಿ ಕುಟುಂಬದ ಒಬ್ಬರು ತಮ್ಮ ಜಮೀನಿನ ಸುತ್ತ ಹುಲ್ಲಲಿಗೋ ಎನ್ನುತ್ತ ನೀರು ಸಿಂಪಡಿಸಿದರೆ ಅದರ ಹಿಂದೆ ಮತ್ತೊಬ್ಬರು ಮಿಶ್ರಣ ಮಾಡಿದ ಅಡುಗೆಯನ್ನು ಎರಚುತ್ತ ಚೆಲ್ಲಂಬರಿಗೋ ಎಂದು ಸಾರುತ್ತ ಜಮೀನಿನ ಸುತ್ತಲೂ ಚರಗ ಚೆಲ್ಲಿದರು.
ಭೂತಾಯಿ ಪೂಜೆ ಸಲ್ಲಿಸಿದ ಬಳಿಕ ಭೋಜನ ಸವಿದರು. ಮನೆಯಲ್ಲಿ ತಯಾರಿಸಿದ ನಾನಾ ಬಗೆಯ ತಿಂಡಿ, ತಿನಿಸುಗಳಾದ ಸಜ್ಜೆಗಡುಬು, ಭರತ, ಭಜ್ಜಿ, ಪುಂಡಿಪಲ್ಲೆ, ಹೋಳಿಗೆ, ಖಡಕ್ ರೊಟ್ಟಿ, ಚಪಾತಿ, ಶೇಂಗಾ ಚಟ್ನಿ ಸೇರಿದಂತೆ ೨-೩ ಬಗೆಯ ಚಟ್ನಿ, ಶಾವಿಗೆ ಪಾಯಸ, ಅನ್ನಸಾಂಬಾರ, ಮೊಸರು, ಹಪ್ಪಳ, ಸಂಡಿಗೆ ಸವಿದರು. ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಊಟವಾದ ಬಳಿಕ ನಾನಾ ರೀತಿಯ ಹಳ್ಳಿಯ ಸೊಗಡಿನ ಆಟವಾಡಿ ಸಂಜೆ ಮನೆಗೆ ವಾಪಸಾದರು.
ಆದರೆ ಕಾಲ ಕಳೆದಂತೆ ಕೆಲ ಸಂಪ್ರದಾಯಗಳು ಬದಲಾಗುತ್ತಿವೆ. ಎತ್ತಿನ ಬಂಡಿ ಬದಲಾಗಿ ಅಟೋ, ಟಂಟಂ, ಬೈಕ್‌ಗಳು ಬಂದಿವೆ. ಆದರೂ ಸಂಪ್ರದಾಯ ಮಾತ್ರ ಮರೆಯದ ನಮ್ಮ ಜನತೆ ಹಿಂದೆ ಬರಗಾಲದ ಅವಯಲ್ಲೂ ಜಮೀನಿಗೆ ಪೂಜೆ ಸಲ್ಲಿಸುವುದು ನಿಲ್ಲಿಸಿಲ್ಲ.
ರೈತರಿಗೆ ಇಂಥ ಹಬ್ಬಗಳು ಉತ್ಸಾಹದೊಂದಿಗೆ ನೆಮ್ಮದಿಯನ್ನೂ ತಂದು ಕೊಡುತ್ತವೆ. ಭೂತಾಯಿಯನ್ನು ಸಂತೃಪ್ತಗೊಳಿಸಿದ ಸಂತೃಪ್ತಿ ರೈತರಿಗಿದೆ. ರೈತರ ಈ ಸಂಭ್ರಮ ನೋಡಿ ಭೂತಾಯಿ ಮೊಗದಲ್ಲಿ ಮತ್ತಷ್ಟು ಹುಮ್ಮಸ್ಸು ಮೂಡುವಂತಾಗಲಿ. ಕಾಲ ಕಾಲಕ್ಕೆ ಉತ್ತಮ ಮಳೆ ಬಂದು ಜಮೀನುಗಳೆಲ್ಲ ಹಸಿರಿನಿಂದ ಕಂಗೊಳಿಸಲಿ ಎಂಬುದು ರೈತರ ಆಶಯವಾಗಿದೆ.