ಬಾಗಲಕೋಟೆ
ಬದಲಾದ ಕಾಲ ಘಟ್ಟದಲ್ಲಿ ಶಿಕ್ಷಣ ಬಹುದೊಡ್ಡ ಮಹತ್ವ ಪಡೆದುಕೊಂಡಿದ್ದು ಅದು ಪ್ರತಿಯೊಬ್ಬರ ಪ್ರಥಮ ಆದ್ಯತೆ ಆಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಹೇಳಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿಯ ಸರಕಾರಿ ಪದವಿ ಪೂರ್ವ ಕಾಲೇಜ್ನ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ತಾಯಂದಿರ ಸಭೆಯಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕುವಲ್ಲಿ ಶಿಕ್ಷಕರ ಜೊತೆಗೆ ತಾಯಂದಿರ ಪಾತ್ರ ಕೂಡ ಬಹು ದೊಡ್ಡದು. ತಾಯಂದಿರ ಮಾತೃಹೃದಯದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಮಕ್ಕಳ ಕಲಿಕೆಗೆ ಸಂಜೀವಿನಿಯಾಗಬಲ್ಲದು ಎಂದು ಹೇಳಿದರು.
ಕಡ್ಡಾಯ ಮತ್ತು ಉಚಿತ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕಾಗಿದ್ದು ಎಲ್ಲ ಪಾಲಕ ಪೋಷಕರು ಮಾತ್ರವಲ್ಲದೇ ಸಮಾಜದ ಜನತೆಯ ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಬೇಕಿದೆ. ಪ್ರೌಢಹಂತದ ಶಿಕ್ಷಣ ಮಕ್ಕಳ ಉನ್ನತ ಶಿಕ್ಷಣಕ್ಕೆ ಬುನಾದಿಯಾಗಿದೆ. ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸುವುದು ಎಲ್ಲ ವಿದ್ಯಾರ್ಥಿಗಳ ಪ್ರಥಮ ಆದ್ಯತೆಯಾಗಬೇಕು. ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯ ಕೈಗೊಂಡಿದೆ. ತಮ್ಮೆಲ್ಲರ ಸಹಕಾರದಿಂದ ಇದು ಸಿದ್ಧಿಸಬಲ್ಲದು ಎಂದರು.
ಶಿಕ್ಷಕ ಮಹಾದೇವ ಬಸರಕೋಡ, ಮಕ್ಕಳ ಪ್ರಗತಿಯಲ್ಲಿ ತಾಯಂದಿರ ಪಾತ್ರ ಅತ್ಯಂತ ಮಹತ್ವ ಪಡೆಯುತ್ತದೆ. ಫಲಿತಾಂಶ ಹೆಚ್ಚಳಕ್ಕೆ ತಾಯಂದಿರು ಮಕ್ಕಳನ್ನು ಅತ್ಯಂತ ಕಾಳಜಿ, ಪ್ರೀತಿಯಿಂದ ಮಾನಸಿಕವಾಗಿ ಅವರನ್ನು ಸಿದ್ಧಗೊಳಿಸಬೇಕಾದ ಕಾರ್ಯಕ್ಕೆ ಶಿಕ್ಷಕರ ಜೊತೆಗೆ ಕೈಜೋಡಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಉಪಪ್ರಾಚಾರ್ಯ ಎಚ್.ಎಂ.ಹಾಲನ್ನವರ ಮಾತನಾಡಿದರು. ಶಿಕ್ಷಕಿ ಪಿ.ಎಸ್.ಗಿರಿಯಪ್ಪನವರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಾಗವಾನ, ಶಿಕ್ಷಕಿಯರಾದ ನಿರ್ಮಲಾ ಕುಂಚನೂರ, ಶಾರದಾ ಬಿಸಲದಿನ್ನಿ, ಅಶೋಕ ಲಮಾಣಿ, ತಾಯಂದಿರ ಪ್ರತಿನಿಧಿ ಮಂಜುಳಾ ಪಾಟೀಲ್, ಮೈತ್ರಾ ಘಂಟಿ ಇತರರಿದ್ದರು.
ಇದೇ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ವೃತ್ತಿ ಶಿಕ್ಷಣ ಕಲಿಕೋತ್ಸದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿಯರಾದ ರೇಣುಕಾ ಬಾಗಲಿ ಮತ್ತು ಮಧು, ಮಾರ್ಗದರ್ಶನ ಮಾಡಿದ ವೃತ್ತಿ ಶಿಕ್ಷಕಿ ಶೋಭಾ ಮುಂಡೇವಾಡಿ ಅವರನ್ನು ಸತ್ಕರಿಸಲಾಯಿತು.