ಬಾಗಲಕೋಟೆ
ಶರಣರ ಕಾಲಘಟ್ಟದಲ್ಲೇ ಹೆಣ್ಣಿಗೆ ಪೂಜ್ಯನೀಯ ಸ್ಥಾನ ನೀಡಲಾಗಿತ್ತು ಎಂದು ಶಿಕ್ಷಕ ಸುಭಾಸ ಕಣಗಿ ಹೇಳಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು ಎಂಬ ಸಿದ್ದರಾಮರ ವಚನದಲ್ಲಿ ಉಲ್ಲೇಖಿಸಿದಂತೆ ಗಂಗೆ, ಲಕ್ಷ್ಮೀ, ಸರಸ್ವತಿಯರ ಸ್ವರೂಪವೇ ಆದ ಹೆಣ್ಣು ರಾಕ್ಷಸಿಯಲ್ಲ ಅವಳು ಸಾಕ್ಷಾತ್ ದೇವತೆಯೇ ಆಗಿದ್ದಾಳೆ ಎಂದರು.
ಪ್ರಸ್ತುತ ವಿದ್ಯಾವಂತ ಸಮಾಜದಲ್ಲಿ ಹೆಣ್ಣು ಸಕಲ ಸೌಲಭ್ಯ ಪಡೆದು ಗೌರವದ ಸ್ಥಾನದಲ್ಲಿದ್ದಾಳೆ. ಇಂದಿನ ಅವಳ ಮುಕ್ತ ಸ್ವಾತಂತ್ರ‍್ಯಕ್ಕೆ ಅಡಿಪಾಯ ಹಾಕಿದವರು ಹನ್ನೆರಡನೇ ಶತಮಾನದಲ್ಲಿ ವಚನಕ್ರಾಂತಿ ಮಾಡಿದ ನಮ್ಮ ಶರಣರು ಎಂದು ಹೇಳಿದರು.
ಶಿಕ್ಷಕ ಅಶೋಕ ಬಳ್ಳಾ, ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ ಐತಿಹಾಸಿಕ, ಧಾರ್ಮಿಕ, ಹೋರಾಟಗಾರರ, ಸಾಧಕರ ಸ್ಮರಣೆ, ದಿನಾಚರಣೆಗಳ ಪಾತ್ರ ದೊಡ್ಡದು. ಆ ಮೂಲಕ ಮಕ್ಕಳಲ್ಲಿ ನಮ್ಮ ಇತಿಹಾಸ ಸಂಸ್ಕೃತಿ, ಪರಂಪರೆಯ ಪರಿಚಯವಾಗುವುದರ ಜೊತೆಗೆ ಮನಸ್ಸು ಧನಾತ್ಮಕ ಮತ್ತು ವೈಚಾರಿಕತೆಗೆ ತೆರೆದುಕೊಳ್ಳುತ್ತದೆ ಎಂದರು.
ಶಿಕ್ಷಕರಾದ ಎಸ್.ಎಸ್.ಲಾಯದಗುಂದಿ, ಮಹಾಂತೇಶ ವಂದಾಲಿ, ವಿದ್ಯಾರ್ಥಿ ಪ್ರತಿನಿಗಳಾದ ಆದರ್ಶ ಮಾಗಿ, ಪ್ರಿಯಾಂಕಾ ಪಾಟೀಲ, ಭಾಗೀರಥಿ, ಶಿವಲೀಲಾ, ಮಹಾಂತೇಶ ಇದ್ದರು.