ಬೆಂಗಳೂರು: ವಾರದೊಳಗೆ ಕನಿಷ್ಠ 30 ಲಕ್ಷ ರೈತರಿಗೆ ಬೆಳೆ ಪರಿಹಾರದ ಮೊದಲ ಕಂತಿನ ಹಣ ತಲುಪಲಿದ್ದು, ಪರಿಹಾರದ ಹಣವನ್ನು ಶೀಘ್ರ ರೈತರಿಗೆ ತಲುಪಿಸಲು ಕ್ರಮ ವಹಿಸುವಂತೆ ಡಿಸಿಗಳಿಗೆ ಸೂಚಿಸಲಾಗಿದೆ,” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಶುಕ್ರವಾರ ತಿಳಿಸಿದರು.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಫ್ರೂಟ್ಸ್ ತಂತ್ರಾಂಶಕ್ಕೆ ಹೊಸದಾಗಿ 7.7 ಲಕ್ಷ ರೈತರ 34 ಲಕ್ಷ ಭೂ ಹಿಡುವಳಿ ಸೇರಿಸಲಾಗಿದ್ದು, ಫ್ರೂಟ್ಸ್‌ನಲ್ಲಿ ಶೇ. 61ರಷ್ಟಿದ್ದ ರೈತರ ವಿವರಗಳು ಶೇ. 78ಕ್ಕೆ ತಲುಪಿದೆ. ಇನ್ನೂ ಅರ್ಹ ರೈತರನ್ನು ಸೇರ್ಪಡೆ ಮಾಡಲು ಸೂಚಿಸಲಾಗಿದೆ,” ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು.
ಕಳೆದ 2021 – 22 ಮತ್ತು 2022 – 23ನೇ ಸಾಲಿನಲ್ಲಿ ಅತಿವೃಷ್ಟಿ ನಷ್ಟ ಪರಿಹಾರ ವಿತರಣೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು, , “ಹಾವೇರಿಯ ಶಿಗ್ಗಾವಿಯಲ್ಲಿ ಪ್ರಭಾವಿ ವ್ಯಕ್ತಿಯ ಸಹೋದರನ ಹೆಸರಿನಲ್ಲಿರುವ ಜಮೀನಿಗೆ ಬೇರೆ ವ್ಯಕ್ತಿ ಪರಿಹಾರ ಪಡೆದಿದ್ದಾರೆ. ಕಡೂರು ತಾಲೂಕು ಒಂದರಲ್ಲೇ 6 ಕೋಟಿ ರೂ. ಹಣ ದುರ್ಬಳಕೆಯಾಗಿದೆ,” ಎಂದರು.
ಯಾರದ್ದೋ ಭೂಮಿಗೆ ಬೇರೆ ಯಾರದ್ದೋ ಖಾತೆಗೆ ಹಣ ಜಮಾ ಮಾಡಿ ಅದನ್ನು ಮರು ವಸೂಲಿ ಮಾಡಿಕೊಂಡಿರುವ ಬಗ್ಗೆಯೂ ವ್ಯಾಪಕ ದೂರುಗಳು ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು. ಇದು ಮುಂದುವರಿಯಬಾರದು ಎಂಬ ಕಾರಣಕ್ಕೆ ಈ ಬಾರಿ ಫ್ರೂಟ್ಸ್ ಮೂಲಕ ಬೆಳೆ ಪರಿಹಾರ ವಿತರಣೆ ಮಾಡಲಾಗುತ್ತಿದೆ ಎಂದು ಸೂಚಿಸಿದರು.