ಮಂಡ್ಯ:ಸಂಸದೆ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಚರ್ಚೆಯೇ ಆಗಿಲ್ಲ ಎಂದು ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಾಗ್ಗೆ ಎದುರು ಬದುಕು ಸಿಕ್ಕ ಸಂದರ್ಭದಲ್ಲಿ ವಿಶ್ವಾಸದಲ್ಲಿ ಮಾತನಾಡಿದ್ದೇವಷ್ಟೇ. ಚುನಾವಣೆ ಗೆದ್ದ ಬಳಿಕ ಸುಮಲತಾ ಅವರು ನನ್ನ ಬಳಿ ರಾಜಕಾರಣ ಚರ್ಚೆ ಮಾಡಿಲ್ಲ. ಹೀಗಾಗಿ ಚರ್ಚೆಯಾಗದ ವಿಚಾರದ ಬಗ್ಗೆ ಪ್ರಸ್ತಾಪ ಮಾಡೋದಿಲ್ಲ. ನನಗೂ ಬೇರೆಯವರಿಗೂ ವ್ಯತ್ಯಾಸವಿದೆ ಎಂದರು.
ಕೆಲವು ಸಚಿವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸುವುದು ಸತ್ಯ. ಆದರೆ, ಮಂಡ್ಯ ಕ್ಷೇತ್ರದ ಬಗ್ಗೆ ಚರ್ಚೆ ಮಾಡಿಲ್ಲ. ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವುದಾಗಿ ಹೇಳಿರುವ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರೊಂದಿಗೆ ಮಾತನಾಡಿಲ್ಲ. ಕೆಲವು ಪಕ್ಷದ ಆಂತರಿಕ ವಿಚಾರಗಳು, ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಅವುಗಳ ಬಗ್ಗೆ ಹೇಳಲಾಗಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಮ್ಮೊಂದಿಗೆ ಚುನಾವಣೆಯಲ್ಲಿ ಸಕ್ರಿಯವಾಗಿರಲಿದ್ದಾರೆ. ಆ ವಿಶ್ವಾಸ ತಮಗಿದೆ. ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪರ್ಧಿಸುವುದಾದರೆ ಸ್ಪರ್ಧಿಸಲಿ ಬಿಡಿ. ಬೇಡವೆಂದರೆ ಯಾರು? ಅವರು ಬೇಡ, ಇವರು ಬೇಡ ಅನ್ನೋದಿಲ್ಲ. ಸ್ಥಳೀಯವಾಗಿ ಅಭ್ಯರ್ಥಿಗಳು ಇಲ್ಲವಾದಾಗ ಅವರೋ, ಇನ್ನೊಬ್ಬರೋ ಸ್ಪರ್ಧಿಸಲಿದ್ದಾರೆ. ನಮಗೆ ಸ್ಥಳೀಯವಾಗಿ ಅಭ್ಯರ್ಥಿ ಇದ್ದಾರೆ ಎಂದು ಹೇಳಿದರು.
……………………
ಪ್ರಧಾನಿ ಮೋದಿ ಅವರಷ್ಟೇ ರಾಮಮಂದಿರವನ್ನು ಉದ್ಘಾಟಿಸುತ್ತಿದ್ದಾರೆ. ಸಚಿವ ಸಂಪುಟದ ಸದಸ್ಯರನ್ನೇ ಕರೆದಿಲ್ಲ. ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ ಎಲ್.ಕೆ.ಅಡ್ವಾನಿ ಅವರನ್ನೇ ಬರಬೇಡಿ ಎಂದಿದ್ದಾರೆ. ಇತ್ತ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಕರೆದಿಲ್ಲ. ಇದು ಕನ್ನಡಿಗರಿಗೆ ಮಾಡಿದ ಅಪಮಾನವಲ್ಲವೇ ಎಂದು ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.
ಚುನಾವಣೆ ಕಾರಣಕ್ಕೆ ಅಪೂರ್ಣ ರಾಮಮಂದಿರವನ್ನು ಉದ್ಘಾಟಿಸಲಾಗುತ್ತಿದೆ. ಅಪೂರ್ಣ ಮಂದಿರ ಉದ್ಘಾಟನೆಗೆ ಮಠಗಳು ವಿರೋಧಿಸಿವೆ. ರಾಮಮಂದಿರ ಉದ್ಘಾಟನೆ ನಮಗೂ ಸಂತಸ, ನಾವು ರಾಮಭಕ್ತರೇ. ಆದರೆ ಚುನಾವಣೆಗಾಗಿ ಮಾಡುವುದು ಸರಿಯಲ್ಲ. ಚುನಾವಣೆ ಭಾವನೆಯಿಂದ ಉದ್ಘಾಟನೆ ಮಾಡುವುದು ಹೆಚ್ಚು ದಿನ ನಡೆಯೋದಿಲ್ಲ. ದೇವರು, ದೇವಸ್ಥಾನ ಇಟ್ಟುಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ ಎಂದು ಟೀಕಿಸಿದರು.
ಯುಪಿ ಮುಖ್ಯಮಂತ್ರಿಯನ್ನು ಪಕ್ಕಕ್ಕೆ ಕರೆದುಕೊಳ್ಳುತ್ತಾರೆ. ಆದರೆ, ಅಮಿತ್ ಕೂಡ ಇಲ್ಲ. ಎಲ್ಲವೂ ಮೋದಿಮಯ. ಮೋದಿ ಅವರದೂ ದೊಡ್ಡ ಫೋಟೊಗಳು, ರಾಮನದು ಚಿಕ್ಕ ಫೋಟೋಗಳು. ದೇವರನ್ನು ಮುಂದಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಜನ ಉತ್ತರ ಕೊಡುವ ದಿನ ಬರುತ್ತದೆ. ಈ ಚುನಾವಣೆಯಲ್ಲೇ ಬರಬಹುದು ಅಥವಾ ಮುಂದಿನ ಚುನಾವಣೆಯಲ್ಲಾದರೂ ಆಗಬಹುದು ಎಂದು ಮಾರ್ಮಿಕವಾಗಿ ನುಡಿದರು.
===============