ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಅವರು ಅಯೋಧ್ಯೆಯ ರಾಮ ಮಂದಿರದ (Ram Mandir) ಶ್ರೀ ರಾಮಲಲ್ಲಾನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಬೆಳ್ಳಿಯ ಛತ್ರದೊಂದಿಗೆ ಮಂದಿರ ಪ್ರವೇಶಿಸಿದ ಅವರು ಪೂಜೆಗಳಲ್ಲಿ ಪಾಲ್ಗೊಂಡು ಪ್ರಾಣ ಪ್ರತಿಷ್ಠೆ ಮಾಡಿದರು. ಈ ಎಲ್ಲ ಪೂಜೆ ಹಾಗೂ ಪ್ರಾಣ ಪ್ರತಿಷ್ಠೆಗೆ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಪ್ರಧಾನಿ ಮೋದಿಗೆ ಮಾರ್ಗದರ್ಶನ ಮಾಡಿದರು.
ಪೇಜಾವರ ಶ್ರೀಗಳು ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯರಾಗಿದ್ದಾರೆ. ದೇಗುಲ ನಿರ್ಮಾಣ ಕಾರ್ಯ ಹಾಗೂ ಯೋಜನೆಯಲ್ಲಿ ಅವರ ಪ್ರಧಾನ ಪಾತ್ರವಿದೆ. ಅಂತೆಯೇ ಅವರು ಪ್ರಾಣ ಪ್ರತಿಷ್ಠೆ ಹಾಗೂ ದೇಗುಲದ ಧಾರ್ಮಿಕ ವಿಧಿ, ವಿಧಾನಗಳಲ್ಲೂ ಮಾರ್ಗದರ್ಶನ ಮಾಡಿದರು.
ಈಗ ಶ್ರೀ ವಿಶ್ವಪ್ರಸನ್ನ ತೀರ್ಥರು ಮುಂಚೂಣಿಯಲ್ಲಿ
ಪೇಜಾವರ ಸ್ವಾಮೀಜಿಯವರು ಕೃಷ್ಣೈಕ್ಯರಾದ ಬಳಿಕ ಈಗ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಮಂದಿರ ನಿರ್ಮಾಣ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಪ್ರತಿಷ್ಠಿತ ಶ್ರೀ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥರು ಸದಸ್ಯರಾಗಿದ್ದಾರೆ. ಈ ಟ್ರಸ್ಟ್‌ನಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಸಂತ ಇವರು. ಅಯೋಧ್ಯೆಗೆ ನಿರಂತರ ಭೇಟಿ ನೀಡುತ್ತ ಮಂದಿರ ನಿರ್ಮಾಣ ಮತ್ತು ಉದ್ಘಾಟನೆಯ ವಿಧಿ ವಿಧಾನಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ರಾಮ ಮಂದಿರದ ಮಹತ್ವ ಮತ್ತು ರಾಷ್ಟ್ರೀಯತೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತಿದ್ದಾರೆ.
ಶತಮಾನಗಳ ಕನಸು ನನಸು
ಸುಮಾರು 496 ವರ್ಷಗಳಿಂದ ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮಮಂದಿರದ (Ram Mandir) ಕನಸು ನನಸಾಗಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠಾಪನೆ ) ನೆರವೇರಿಸಲಾಗಿದೆ. ಇದರೊಂದಿಗೆ ರಾಮಮಂದಿರವು ಉದ್ಘಾಟನೆಯಾದಂತಾಗಿದ್ದು, ದೇಶಾದ್ಯಂತ ಸಂತಸ ಮನೆ ಮಾಡಿದೆ.
ವಿಶೇಷ ಹೆಲಿಕಾಪ್ಟರ್‌ನಲ್ಲಿ ರಾಮಮಂದಿರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬೆಳ್ಳಿಯ ಛತ್ರವನ್ನು ಹಿಡಿದುಕೊಂಡು ರಾಮಮಂದಿರ ಪ್ರವೇಶಿಸಿದರು. ಇದಾದ ಬಳಿಕ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಅವರು, ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್‌ದಾಸ್ ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠೆ ನೆರವೇರಿಸಿದರು.