ಬೆಂಗಳೂರು: ಇಂದು ಸಿಲಿಕಾನ್ ಸಿಟಿಯಲ್ಲಿ 545 ಮಂದಿ ಪಿಎಸ್ಐ ನೇಮಕಾತಿಗಾಗಿ ಮರು ಪರೀಕ್ಷೆ ನಡೆಯುತ್ತಿದ್ದು, ಹಿಂದೆ ನಡೆದ ಪರೀಕ್ಷೆಯಲ್ಲಿ ಒಂದು ಅವಾಂತರವಾಗಿದ್ದರೆ, ಇದೀಗ ನಡೆಯುತ್ತಿರುವ ಲಿಖಿತ ಪರೀಕ್ಷೆಯೂ ಒಂದಷ್ಟು ವಿವಾದ ಹಾಗೂ ಕಿರಿಕ್ ಗಳ ಮಧ್ಯೆ ನಡೆಯುತ್ತಿದ್ದು, ಯಾವುದೇ ಲೋಪವಾಗದಂತೆ ಪರೀಕ್ಷೆ ನಡೆಸುವ ಜವಾಬ್ದಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಐ) ವಹಿಸಲಾಗಿದೆ ಎಂದು ಮಾಹಿತಿ ಕಂಡು ಬಂದಿದೆ.
ಈಗಾಗಲೇ ಹಗರಣದಲ್ಲಿ ಸಿಲುಕಿ ರಂಪ ರಾಡಿ ಮಾಡಿಕೊಂಡಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸುವಂತೆ ಹೈಕೋರ್ಟ್ ಆದೇಶಿಸಿರುವ ಹಿನ್ನೆಲೆ ಇಂದು ನಗರದಲ್ಲಿ ಮರು ಪರೀಕ್ಷೆ ನಡೆಯುತ್ತಿದೆ. ಬೆಂಗಳೂರಿನ 117 ಪರೀಕ್ಷಾ ಕೇಂದ್ರಗಳಲ್ಲಿ ಪಿಎಸ್‌ಐ ನೇಮಕಾತಿಗೆ ಮರು ಪರೀಕ್ಷೆ ಎರಡು ವಿಷಯಗಳಿಗೆ ನಡೆಯುತ್ತಿದೆ.
54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಪ್ರವೇಶ ಪತ್ರ ಪಡೆದಿದ್ದು, ಪಿಎಸ್ ಐ ಪರೀಕ್ಷೆ ಇಂದು ಬೆಂಗಳೂರಿನಲ್ಲಿ ಕೆಇಐ ಕಟ್ಟೆಚ್ಚರ ವಹಿಸಿ ನಡೆಸುತ್ತಿದ್ದು, ಬೆಂಗಳೂರು ಪೊಲೀಸರು ಕಟ್ಟುನಿಟ್ಟಿನ ಭದ್ರತೆ ಒದಗಿಸಿದೆ. ಪರೀಕ್ಷಾ ಪ್ರಾಧಿಕಾರವು ಪಿಎಸ್ಐ ಪರೀಕ್ಷೆಗೆ ವಸ್ತ್ರಸಂಹಿತೆ ಜಾರಿಗೊಳಿಸಿದ್ದು, ಪರೀಕ್ಷಾ ಕೇಂದ್ರಕ್ಕೆ ಕೆಲವು ವಸ್ತುಗಳಿಗೆ ನಿಷೇಧ ಜಾರಿ ಮಾಡಿದೆ.
ಬೆಳಿಗ್ಗೆ 10.30 ರಿಂದ 12 ಮಧ್ಯಾಹ್ನನದವರೆಗೆ ಪೇಪರ್ 1 ಗೆ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಗೆ 50 ಅಂಕಗಳನ್ನು ನಿಗದಿ ಮಾಡಲಾಗಿದೆ. ಮಧ್ಯಾಹ್ನ 1ರಿಂದ ಮಧ್ಯಾಹ್ನ 2.30 ರವರೆಗೆ ಪೇಪರ್ 2ಕ್ಕೆ ಪರೀಕ್ಷೆ ನಡೆಯಲಿದ್ದು 150 ಅಂಕಗಳನ್ನು ನಿಗದಿಪಡಿಸಲಾಗಿದೆ.