ಬೆಂಗಳೂರು: ಗಣರಾಜ್ಯೋತ್ಸವದ ಪ್ರಯುಕ್ತವಾಗಿ ನಗರದ ಸಸ್ಯಕಾಶಿ ಲಾಲ್ಬಾಗ್ನಲ್ಲಿ 215ನೇ ಫ್ಲವರ್ ಶೋ ನಡೆಯುತ್ತಿದ್ದು, ವೀಕ್ಎಂಡ್ ಆಗಿರುವುದರಿಂದ ಸಾವಿರಾರು ಜನರು ಫ್ಲವರವ ಶೋ ವೀಕ್ಷಣೆ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ನಿನ್ನೆ ಗಣರಾಜ್ಯೋತ್ಸವ ಅಂಗವಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಲಾಲ್ ಬಾಗ್ಗೆ ಭೇಟಿ ನೀಡಿದ್ದು, ನಿನ್ನೆ ಒಂದೇ ದಿನ 96,500 ಜನರು ಫ್ಲವರ್ ಶೋ ವೀಕ್ಷಣೆ ಮಾಡಿದ್ದು, ಟಿಕೆಟ್ ಮಾರಾಟದಿಂದ 65 ಲಕ್ಷ ರೂ. ಆದಾಯವಾಗಿದೆ. ಈ ಬಾರಿ ಬಸವಣ್ಣ ಮತ್ತು ವಚನ ಸಾಹಿತ್ಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ನಾಳೆ ಕೊನೆಯ ದಿನವಾಗಿದೆ.ಈ ಬಾರಿಯ ಫ್ಲವರ್ ಶೋಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು.
ಬಳಿಕ ಮಾತನಾಡಿದ್ದ ಅವರು, ಬಸವಣ್ಣನವರನ್ನು ಇನ್ಮುಂದೆ ಸಾಂಸ್ಕೃತಿಕ ನಾಯಕ ಎಂದು ಕರೆಯಲಾಗುತ್ತೆ ಅಂತ ಹೇಳಿದ್ದರು.ವಿದೇಶಿ ಹೂಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಫ್ಲವರ್ ಶೋನಲ್ಲಿ ಇಪೇಶನ್ಸ್, ಪೆಟುನೀಯಾ, ಜೆರೇನಿಯಮ್, ಜೇರ್ಬೇರ, ಸೇವಂತಿಗೆ, ಕೆಲಾಂಚೋ, ಸಾಲ್ವಿಯಾ ಸೇರಿದಂತೆ ಇಂಡೋ ಅಮೇರಿಕನ್ ಹೈಬ್ರಿಡ್ ಹೂವುಗಳು ನೋಡುಗರ ಕಣ್ಮನ ಸೆಳೆದಿವೆ.
ಫಲಪುಷ್ಪ ಪ್ರದರ್ಶನದಲ್ಲಿ ಒಟ್ಟು 68 ಬಗೆಯ ಹೂಗಳನ್ನ ಬಳಸಲಾಗಿದ್ದು, ಗುಲಾಬಿ, ಸಂಪಿಗೆ, ಪ್ಯಾಲನೋಪ್ಸ್, ಲ್ಯಾಡ್ಸ್ ಹೂ ಎಲ್ಲರ ಗಮನ ಸೆಳೆಯುತ್ತಿವೆ. ವಚನಕಾರರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಇಷ್ಟಲಿಂಗವನ್ನ ನಿರ್ಮಾಣ ಮಾಡಲಾಗಿದೆ.