ವಿಜಯನಗರ: ಹಂಪಿ ಉತ್ಸವಕ್ಕೆ ಬರೋಬ್ಬರಿ 14 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಬರದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಉತ್ಸವಕ್ಕೆ ಪ್ರಾಮುಖ್ಯತೆ ನೀಡಿರುವ ರಾಜ್ಯ ಸರಕಾರ ಹೇಳಿದಂತೆ ಅದ್ಧೂರಿ ಆಚರಣೆಗೆ ಸನ್ನದ್ಧವಾಗುವ ಜತೆಗೆ ಅನುದಾನ ಬಿಡುಗಡೆ ಮಾಡಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಉತ್ಸವಕ್ಕೆ 17 ಕೋಟಿ ರೂ. ಅನುದಾನಕ್ಕಾಗಿ ಜಿಲ್ಲಾಡಳಿತದಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 14 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಉಳಿದಂತೆ ಸ್ಥಳೀಯವಾಗಿ ಉತ್ಸವಕ್ಕೆ ಸಹಕಾರ ಪಡೆದುಕೊಳ್ಳಲಾಗಿದೆ.ಉತ್ಸವಕ್ಕೆ ಅದ್ಧೂರಿ ಸಿದ್ಧತೆಗಳು ನಡೆದಿವೆ. ಉತ್ಸವದ ಪ್ರಧಾನ ವೇದಿಕೆ ಗಾಯತ್ರಿ ಪೀಠ ಸೇರಿ ನಾಲ್ಕು ವೇದಿಕೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಹೊಸಪೇಟೆ ನಗರ ಮತ್ತು ಹಂಪಿ ಹಾಗೂ ಕಮಲಾಪುರ ಪಟ್ಟಣದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಸಿದ್ಧತೆಗಳು ಜೋರಾಗಿದ್ದು, ಹಂಪಿ ಉತ್ಸವ ಆಚರಣೆಗೆ ದಿನಾಂಕ ನಿಗದಿ ಕೂಗು ಮೊದಲಿನಿಂದಲೂ ಕೇಳಿಬಂದಿದೆ. ಈ ಮೊದಲು ನವೆಂಬರ್ 3, 4, 5ರಂದು ಉತ್ಸವ ಆಚರಣೆ ಮಾಡಲಾಗುತ್ತಿತ್ತು. ಆ ಬಳಿಕ ಸರಕಾರಗಳು ಬದಲಾದಂತೆ ದಿನಾಂಕವೂ ಕೂಡ ಬದಲಾಗುತ್ತಲೇ ಬಂದಿದೆ.
ಕೊನೆಯದಾಗಿ 2017ರಲ್ಲಿ ನವೆಂಬರ್ ಉತ್ಸವ ಆಚರಣೆ ಮಾಡಲಾಗಿತ್ತು. ಆದರೆ, ಆ ಬಳಿಕ ಜನವರಿ, ಫೆಬ್ರವರಿ, ಮಾರ್ಚ್‌ನಲ್ಲಿ ಉತ್ಸವ ಆಚರಿಸಲಾಗಿದೆ. ಆದರೆ, ಕಲಾವಿದರು ಮಾತ್ರ ಉತ್ಸವಕ್ಕೆ ದಿನಾಂಕ ನಿಗದಿಪಡಿಸಿ, ಅನುದಾನ ಮೀಸಲಿಡಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದಾರೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.