ತುಮಕೂರು: ಒಂದು ಉತ್ಪನ್ನ ಯೋಜನೆ(ಒಡಿಒಪಿ) ಹಾಗೂ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆಯಡಿ ಉದ್ಯಮ ಆರಂಭಿಸಿರುವ ರೈತರಿಗೆ ಕಳೆದ ಮಾರ್ಚ್ ನಿಂದ ಸಬ್ಸಿಡಿ ಸ್ಥಗಿತವಾಗಿದ್ದು, ಕಿರು ಉದ್ಯಮ ಆರಂಭಿಸಿರುವ ರೈತರು ಸಾಲದ ಮೇಲಿನ ಬಡ್ಡಿ ಹೊರೆಯಿಂದ ತತ್ತರಿಸುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಯೋಜನೆಗೆ ಕೇಂದ್ರ ಸರಕಾರ ಶೇ.35, ರಾಜ್ಯ ಸರಕಾರ ಶೇ.15ರಷ್ಟು ಸಹಾಯಧನ ಸೇರಿದಂತೆ ಶೇ.50ರಷ್ಟು ಸಬ್ಸಿಡಿ ಸೌಲಭ್ಯ (ಗರಿಷ್ಠ 10 ಲಕ್ಷ ರೂ.)ವನ್ನು ಆಹಾರ ಸಂಸ್ಕರಣಾ, ಉತ್ಪದನಾ ಘಟಕಗಳಿಗೆ ನೀಡಲಾಗುತ್ತದೆ. ಇದನ್ನು ಆದ್ಯತೆ ಮೇರೆಗೆ ನೀಡುತ್ತಿದ್ದರೂ 2023ರ ಮಾರ್ಚ್ ನಂತರ ಯಾರಿಗೂ ಸಹಾಯಧನ ಜಮೆಯಾಗಿಲ್ಲ.ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ನೆರವಿನಿಂದ ಉದ್ಯಮದ ಜತೆಗೆ ಆರ್ಥಿಕ ಸ್ವಾವಲಂಭನೆ ಸಾಧಿಸುವ ಕನಸಿನೊಂದಿಗೆ ಘಟಕ ಆರಂಭಿಸಿರುವ ರೈತರಿಗೆ ಬಡ್ಡಿ ಹೊಡೆತ ಬಿದ್ದಿದೆ.
ರೈತರು ತಾವು ಬೆಳೆದ ಬೆಳೆಯ ಮೌಲ್ಯವರ್ಧನೆ ಮಾಡಿ ಹೊಸ ಆದಾಯದ ಮೂಲ ಕಂಡುಕೊಳ್ಳುವುದು ಯೋಜನೆಯ ಆಶಯ. ಅದರಂತೆ ರೈತರು ಯೋಜನೆ ಫಲ ಪಡೆಯಲು ಆಸಕ್ತರಾಗಿದ್ದರು.ಯೋಜನೆಯಡಿ ಘಟಕ ಆರಂಭಿಸುವ ಹೊಸ ಉದ್ಯಮಿಗಳಿಗೆ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯವಿದೆ. ಶೇ.50ರಷ್ಟು ಸಬ್ಸಿಡಿ ಇದ್ದರೆ, ಶೇ.50ರಷ್ಟನ್ನು ತಾವೇ ಭರಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿಶೇ 9-10 ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿಶೇ 10ಕ್ಕಿಂತ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ.
ಸಬ್ಸಿಡಿ ಹಣ ಖಾತೆಗೆ ಜಮೆಯಾದರೂ ಅದನ್ನು ಆರಂಭದಲ್ಲಿ ಡ್ರಾ ಮಾಡಿಕೊಳ್ಳಲು ಆಗುವುದಿಲ್ಲ. 3 ವರ್ಷದ ಬಳಿಕ ಡ್ರಾ ಮಾಡಿಕೊಳ್ಳಬೇಕಾಗುತ್ತದೆ. ಫಲಾನುಭವಿ ನಿಯಮಿತವಾಗಿ ನಿಗದಿತ ಸಮಯದಲ್ಲಿಸಾಲ ಮರು ಪಾವತಿ ಮಾಡುತ್ತಾನೆಯೇ ಎಂಬುದು ಗಮನಿಸಿ, ಆತ ಮರುಪಾವತಿ ಮಾಡುತ್ತಾನೆಂಬ ವಿಶ್ವಾಸ ಪಡೆದ ಬಳಿಕವಷ್ಟೇ ಸಬ್ಸಿಡಿ ಹಣ ಬಳಸಿಕೊಳ್ಳಬಹುದು.