ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯದ ಪಾಲಿನ ಹಣ ನೀಡದೆ ಅನ್ಯಾಯ ಎಸಗುತ್ತಿದ್ದು, ಇದನ್ನು ಪ್ರಶ್ನಿಸಲು ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಅವರಿಗೆ ಬಾಯಿಯೇ ಬರುತ್ತಿಲ್ಲ. ಬಿಎಸ್ ಯಡಿಯೂರಪ್ಪ ಅವರಿಗೂ ಬಾಯಿ ಬರಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಅನುದಾನ ನೀಡುವ ವಿಚಾರದಲ್ಲಿ ಕೇಂದ್ರದಿಂದ ಸಾಕಷ್ಟು ಅನ್ಯಾಯವಾಗುತ್ತಿದ್ದು, ಪ್ರತಿಪಕ್ಷ ನಾಯಕ ಆರ್ ಅಶೋಕ್‌ಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದರು.
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ ಈ ಬಗ್ಗೆ ತುಟಿಬಿಚ್ಚಿಲ್ಲ. ದೇಶದ ಗಮನ ಸೆಳೆಯಲು ನಾಡಿದ್ದು ಪ್ರತಿಭಟನೆ ನಡೆಸುತ್ತಿದ್ದು, ಫೆ. 7ರಂದು ನಡೆಯುವ ಪ್ರತಿಭಟನೆಗೆ ಎಲ್ಲರೂ ಸಹಕರಿಸಿ ಎಂದು ಮುಖ್ಯಮಂತ್ರಿಗಳು ಸಚಿವರು, ಶಾಸಕರಿಗೆ ಮನವಿ ಮಾಡಿದರು.
ಉತ್ತರದ ರಾಜ್ಯಗಳಿಗೆ ಅನುದಾನ ಕೊಡಿ, ಬೇಡವೆನ್ನುವುದಿಲ್ಲ. ದಕ್ಷಿಣದ ರಾಜ್ಯಗಳ ಕಡೆ ಗಮನಹರಿಸಿ. ರಾಜ್ಯದಿಂದ ಜೋಶಿ, ಶೋಭಾ, ಭಗವಂತ ಖೂಬಾ ಕೇಂದ್ರ ಮಂತ್ರಿಗಳಾಗಿದ್ದು, ಒಂದು ದಿನವೂ ಅವರು ಬಾಯಿಬಿಡಲಿಲ್ಲ. ಸಂಸತ್‌ನಲ್ಲಿ ಇದರ ಬಗ್ಗೆ ಅವರು ಮಾತನಾಡಿದ್ದಾರಾ? ಇದೆಲ್ಲ ರಾಜ್ಯಕ್ಕೆ ಅನ್ಯಾಯ ಅಲ್ವೇ? ಜನ ಇವರನ್ನು ಆಶೀರ್ವಾದ ಮಾಡಿ ಕಳಿಹಿಸಿಲ್ಲವೇ? ಹಣಕಾಸು ಸಚಿವರು ನಮ್ಮ ರಾಜ್ಯದಿಂದಲೇ ಕೇಂದ್ರಕ್ಕೆ ಹೋಗಿದ್ದಾರೆ. ಅವರೇ ರಾಜ್ಯಕ್ಕೆ ಅನ್ಯಾಯ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.