ಡೆಹ್ರಾಡೂನ್: ಏಕರೂಪ ನಾಗರಿಕ ಸಂಹಿತೆ ಮುಸ್ಲಿಮರ ಪವಿತ್ರ ಗ್ರಂಥ ಕುರಾನ್‌ನ ತತ್ವಗಳಿಗೆ ವಿರುದ್ಧವಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದ ಎಸ್.ಟಿ.ಹಸನ್ ಹೇಳಿದ್ದು ನಮ್ಮ ಸಮುದಾಯವು ಅದನ್ನು ಪಾಲಿಸುವುದಿಲ್ಲ ಎಂದು ತಿಳಿಸಿದರು.
ಕುರಾನ್‌ನಲ್ಲಿ ಮುಸ್ಲಿಮರಿಗೆ ನೀಡಿರುವ ‘ಹಿದಾಯತ್’ (ಸೂಚನೆಗಳು) ವಿರುದ್ಧವಾಗಿದ್ದರೆ ನಾವು ಅದನ್ನು (ಯುಸಿಸಿ ಬಿಲ್) ಪಾಲಿಸುವುದಿಲ್ಲ. ಅದು ‘ಹಿದಾಯತ್’ ಪ್ರಕಾರವಾಗಿದ್ದರೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.ಯುಸಿಸಿ ಮಸೂದೆಯನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉತ್ತರಾಖಂಡ ವಿಧಾನಸಭೆಯಲ್ಲಿ ಇಂದು (ಮಂಗಳವಾರ) ಮಂಡಿಸಿದರು.
2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಮಸೂದೆಯನ್ನು ಜಾರಿ ಮಾಡುವುದಾಗಿ ಭರವಸೆ ನೀಡಿದ್ದು, ಮಸೂದೆಯು ಕಾನೂನಾದರೆ, ಇದು ಮದುವೆ, ವಿಚ್ಛೇದನ, ಉತ್ತರಾಧಿಕಾರ ಇತ್ಯಾದಿಗಳನ್ನು ನಿಯಂತ್ರಿಸುವ ವೈಯಕ್ತಿಕ ಧಾರ್ಮಿಕ ಕಾನೂನುಗಳನ್ನು ಬದಲಿಸುತ್ತದೆ. ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿರುವುದರಿಂದ ಮಸೂದೆ ಜಾರಿಯಾಗುವ ನಿರೀಕ್ಷೆಯಿದೆ ಎಂದು ಸೂಚಿಸಿದ್ದಾರೆ.