ಬೆಳಗಾವಿ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ಅವರು ಸಂಸದರಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಸತೀಶ್ ಜಾರಕಿಹೊಳಿಗೆ ಬೆಳಗಾವಿ ಟಿಕೆಟ್ ನೀಡಲು ಪ್ಲಾನ್ ಮಾಡಿಕೊಂಡಿದ್ದು, ಈ ವಿಚಾರ ತಿಳಿದ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಸತೀಶ್ ಜಾರಕಿಹೊಳಿ ಬೆಂಬಲಿಗರಾದ ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ, ಕಾಂಗ್ರೆಸ್ ಹೈಕಮಾಂಡ್ಗೆ ಸಂದೇಶ ರವಾನಿಸಲು ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ ಎಂದು ಹೇಳಿದರು.
ಹೈಕಮಾಂಡ್ ಸತೀಶ್ ಜಾರಕಿಹೊಳಿ ಅವರಿಗೆ ಟಿಕೆಟ್ ಕೊಡುತ್ತಿದೆ ಎಂಬ ಮಾಹಿತಿ ಇದೆ. ಆದರೆ ಅವರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಅಭಿವೃದ್ಧಿಗಾಗಿ ಅವರು ಇಲ್ಲೇ ಇರಬೇಕು ಎಂದರು.ಹನ್ನೊಂದು ಶಾಸಕರನ್ನ ಜಿಲ್ಲೆಯಿಂದ ಕೊಟ್ಟಿದ್ದಾರೆ, ಸರ್ಕಾರ ಬರಲು ನಮ್ಮ ಸಾಹೇಬರು ಕೂಡ ಕಾರಣಕರ್ತರಾಗಿದ್ದಾರೆ. ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಆಗಿದ್ದು, ಇವರು ರಾಜ್ಯದಲ್ಲಿ ಇರಬೇಕು, ಕೇಂದ್ರಕ್ಕೆ ಹೋಗಬಾರದು. ಅವರಿಗೆ ಲೋಕಸಭಾ ಟಿಕೆಟ್ ಹೈಕಮಾಂಡ್ ನೀಡಬಾರದು ಎಂದು ಒತ್ತಾಯಿಸಿದರು.
ಜಿಲ್ಲೆಯ ಮತ್ತೊಬ್ಬ ಪ್ರಭಾವಿ ನಾಯಕಿಯೂ ಆಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ಕೊಡಲಿ. ಕಿತ್ತೂರು ಚನ್ನಮ್ಮ ಅಂತಾ ಕರೆಯುತ್ತಾರೆ. ಅಂಜಲಿ ನಿಂಬಾಳ್ಕರ್ ಇದ್ದಾರೆ. ಅವರಿಗೆ ಟಿಕೆಟ್ ಕೊಡಿ. ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸುತ್ತೇವೆ. ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋತರೆ ನಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇವೆ. ಆದರೆ, ಸತೀಶ್ ಜಾರಕಿಹೊಳಿ ಅವರಿಗೆ ಟಿಕೆಟ್ ಕೊಟ್ಟರೆ ನಾವು ಹೋರಾಟ ಮಾಡುತ್ತೇವೆ ಎಂದರು.