ದಾವಣಗೆರೆ: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರಿಗೆ ರಾಜಕೀಯ ಬಿಡುವ ಸವಾಲ್ ಹಾಕಿದರು.
ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ಮರ್ಯಾದೆ ತೆಗೆದಿದ್ದಾರೆ ಎಂದು ಬಿಎಸ್ವೈ ಹೇಳಿದ್ದು, ಹೇಳಿದ್ದಕ್ಕೆಲ್ಲ ಯಡಿಯೂರಪ್ಪ ತಲೆ ಅಲ್ಲಾಡಿಸಿದಂತೆ ನಾನು ತಲೆ ಅಲ್ಲಾಡಿಸ್ಬೇಕಾ? ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರೋದು ಸತ್ಯ ಸತ್ಯ. ಒಂದು ವೇಳೆ ನಾನು ಹೇಳಿದ್ದು ಸುಳ್ಳಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.
ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಸಹ ಬಿಡುಗಡೆ ಆಗಿಲ್ಲ. ಅಮಿತ್ ಶಾ ಜತೆ ಬಿಜೆಪಿ ನಾಯಕರು ಚರ್ಚಿಸಿ ಬಿಡುಗಡೆ ಮಾಡಿಸಿಲ್ಲ. ಯಡಿಯೂರಪ್ಪ, ಆಶೋಕ್, ಬೊಮ್ಮಾಯಿ, ವಿಜಯೇಂದ್ರ ಹೋಗಿ ಕೇಳಲಿ. ನಮಗೆ ಅನ್ಯಾಯವಾದರೆ ಪ್ರತಿಭಟಿಸಬಾರದಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, 100 ರೂಪಾಯಿ ತೆರಿಗೆ ಕೊಟ್ರೆ ನಮಗೆ ಬರುವುದು 12 ರೂ. ಮಾತ್ರ. ನಾವು ಸರಿಯಾಗಿ ಬರ ನಿರ್ವಹಣೆ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಆಗಬಾರದು ಎಂದು ಹೇಳಿದರು.