ದಾವಣಗೆರೆ : ಜಾತಿ ವ್ಯವಸ್ಥೆ ಬೇರೂರಲು ವೈಚಾರಿಕ ಶಿಕ್ಷಣದ ಕೊರತೆ ಕಾರಣವಿದ್ದು, ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನ ಸ್ಥಗಿತಗೊಳಿಸೋದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದಾವಣಗೆರೆಯಲ್ಲಿ ಜಗದ್ಗುರು ಶ್ರೀ ಡಾ: ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳ ಪಟ್ಟಾಭಿಷೇಕ ರಜತ ಮಹೋತ್ಸವ ಮತ್ತು ರಾಷ್ಟ್ರೀಯ ಭಗೀರಥ ಮಹೋತ್ಸವ ಹಾಗೂ ಉಪ್ಪಾರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದು, ಚಲನರಹಿತವಾದ ಜಾತಿ ವ್ಯವಸ್ಥೆ ಬಲವಾಗಿ ಬೇರು ಬಿಟ್ಟಿರುವುದರಿಂದ ಬದಲಾವಣೆ ತರಲು ಇಂದಿಗೂ ಸಾಧ್ಯವಾಗಿಲ್ಲ ಎಂದರು.
ದಾರ್ಶನಿಕರ ಪ್ರಯತ್ನದಿಂದಾಗಿ ಸ್ವಲ್ಪ ಸರಿಹೋಗುವ ಜಾತಿ ವ್ಯವಸ್ಥೆ ಮತ್ತೆ ಯಥಾಸ್ಥಿತಿಗೆ ಮರಳುತ್ತದೆ. ಬಸವಾದಿ ಶರಣರು’ ಇವನಾರವ, ಎನ್ನದೇ ಇವ ನಮ್ಮವ ಎಂದು ಭಾವಿಸುವಂತೆ ಹೇಳಿದ್ದು,ಉಪ್ಪಾರರು ಆರ್ಥಿಕವಾಗಿ , ಸಮಾಜಿಕವಾಗಿ ಹಿಂದುಳಿದಿರುವ ಸಮಾಜ. ಉಪ್ಪು ತಯಾರಿಸಿ ಮಾರಾಟ ಮಾಡುವ ವೃತ್ತಿಯಾಗಿದ್ದು, ಕೈಗಾರೀಕರಣವಾದ ನಂತರ ಅವರ ವೃತ್ತಿ ಬಿಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದರು.
ಇವರ ಕಸುಬಿಗೆ ಧಕ್ಕೆಯುಂಟಾದ ಮೇಲೆ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದು, ಶಿಕ್ಷಣ, ಆರ್ಥಿಕ ಶಕ್ತಿಯಿಂದ ವಂಚಿತರಾಗಿ ಉದ್ಯೋಗವಿಲ್ಲದೇ ಕೂಲಿ ಮಾಡುವ ಸ್ಥಿತಿ ಉಂಟಾಯಿತು. ಉಪ್ಪಾರ ಸಮಾಜ ಮಹಾತ್ಮಾ ಗಾಂಧಿಜಿಯವರು ಬ್ರಿಟಿಷರ ವಿರುದ್ಧ ಹೋರಾಡುವಾಗ ಉಪ್ಪಿನ ಸತ್ಯಾಗ್ರಹ ಮಾಡಿದರು ಅದರಲ್ಲಿ ಉಪ್ಪಾರರ ಕೊಡುಗೆಯೂ ಅಪಾರವಾಗಿತ್ತು ಎಂದು ಸೂಚಿಸಿದರು.